ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚನೆ
ಕನ್ನಡಪ್ರಭ ವಾರ್ತೆ ಕಾರಟಗಿಸಂಪೂರ್ಣ ನೀರಾವರಿ ಪ್ರದೇಶವಾಗಿರುವ ಕಾರಟಗಿ ತಾಲೂಕಿನಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕಾಗಿದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ವಿಶೇಷ ಎಪಿಎಂಸಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ನಿರ್ವಹಣೆ ಕುರಿತು ತಾಲೂಕು ಟಾಸ್ಕ್‌ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತೀವ್ರ ಬರ ಹಿನ್ನೆಲೆ ತಾಲೂಕಿನ ಪ್ರತಿ ಗ್ರಾಮ, ಕ್ಯಾಂಪ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪಿಡಿಒಗಳಿಂದ ಸಮಸ್ಯಾತ್ಮಕ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಪ್ರತಿವಾರ ಸ್ವಚ್ಛಗೊಳಿಸಲೇಬೇಕು ಎಂದರು.
ತಾಲೂಕಿನ ಯಾವುದೇ ಗ್ರಾಮ, ಪಟ್ಟಣದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಿದ್ದು, ತೀವ್ರ ಸಮಸ್ಯೆ ಇರುವ ಗ್ರಾಮಗಳಿಗೆ ₹೩೪ ಲಕ್ಷ ರೂಪಾಯಿಗಳ ಕ್ರಿಯಾಯೋಜನೆ ತಯಾರಿಸಿದ್ದು, ಅನುಮೋದನೆಗೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಗೆ ಕಳುಹಿಸಲಾಗಿದೆ ಎಂದರು.ಖಾಸಗಿ ಬೋರವೆಲ್‌ನಿಂದ ನೀರು ಪಡೆಯುವುದಕ್ಕೆ ಕೂಡಾ ಅನುಮೋದನೆ ನೀಡಿದೆ. ಕಾರಟಗಿ ಪಟ್ಟಣದಲ್ಲಿ ೪ ಖಾಸಗಿ ಬೋರವೆಲ್‌ನಿಂದ ನೀರು ಪಡೆಯಲಾಗುತ್ತಿದೆ. ಇನ್ನು ತಾಲೂಕಿನ ದುಂಡಗಿ, ಹುಳ್ಕಿಹಾಳ ಕ್ಯಾಂಪ್, ಹುಳ್ಕಿಹಾಳ ಗ್ರಾಮ, ಬಸವಣ್ಣಕ್ಯಾಂಪ್, ಬೇವಿನಾಳ ಗ್ರಾಮಗಳಲ್ಲೂ ಕೂಡಾ ಖಾಸಗಿ ಬೋರವೆಲ್‌ನಿಂದ ನೀರು ತೆಗೆದುಕೊಳ್ಳಲು ಅನುಮೋದನೆ ನೀಡಲಾಗಿದೆ. ಇದಕ್ಕೆ ಪ್ರತಿ ತಿಂಗಳು ₹೮ ರಿಂದ ೧೫ ಸಾವಿರ ದರದಲ್ಲಿ ನೀರು ಖರೀದಿ ಮಾಡಿ ಸಮರ್ಪಕ ನೀರು ಪೂರೈಕೆಗೆ ಅನುಮೋದನೆ ಕೊಡಲಾಗಿದೆ ಎಂದು ಹೇಳಿದರು.
ಇನ್ನು ಈಳಿಗನೂರು, ಸಿದ್ದಾಪುರ, ಉಳೇನೂರು, ಬೆನ್ನೂರು ಈ ಎಲ್ಲ ನದಿ ಪಾತ್ರದ ಗ್ರಾಮಗಳು ಇಷ್ಟು ದಿನ ನದಿ ನೀರಿನ ಮೇಲೆ ಅವಲಂಬಿತವಾಗಿದ್ದವು. ಈಗ ನದಿ ಬತ್ತಿದೆ, ಆ ಕಾರಣಕ್ಕೆ ಆದ್ಯತೆ ಮೇಲೆ ಹೊಸ ಬೋರ್‌ವೆಲ್ ಕೊರೆಯಿಸಲಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬೋರ್‌ವೆಲ್‌ಗಳಿಗೆ ನಿರಂತರ ವಿದ್ಯುತ್ ಜ್ಯೋತಿ ಸಂಪರ್ಕ ನೀಡುವಂತೆ ಸೂಚಿಸಿದ ಅವರು, ಜೊತೆಗೆ ಮೋಟರ್ ರಿಪೇರಿ, ಬೋರ್‌ವೆಲ್ ಪ್ರೆಸ್ಸಿಂಗ್ ಕಾಮಗಾರಿಗಳನ್ನು ಆದ್ಯತೆ ಮೇಲೆ ಮಾಡಿಸಲು ಸೂಚಿಸಿದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ದೇವಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಎಇಇ ವಿಜಯಕುಮಾರ್, ತಾಲೂಕಿನ ೧೨ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು, ಪಶು ಸಂಗೋಪನೆ ಅಧಿಕಾರಿಗಳು ಭಾಗವಹಿಸಿದ್ದರು.