ನರೇಗಲ್ಲ: ಪ್ರತಿ ಮನೆಗೂ ಮಹಿಳೆ ಭೂಷಣ. ಮಹಿಳೆ ಇಲ್ಲದ ಮನೆಯನ್ನು ಊಹಿಸಿಕೊಳ್ಳುವುದು ಕಷ್ಟ. ತನ್ನ ಮನೆಯನ್ನು ಬಿಟ್ಟು ಇನ್ನೊಂದು ಮನೆಯನ್ನು ಬೆಳಗಲು ಬಂದ ಮಹಿಳೆಯ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಸ್ಥಳೀಯ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ಬೀಚಿ ಬಳಗದಿಂದ ಆಚರಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಾರತದಲ್ಲಿ ಮಹಿಳೆಗೆ ವಿಶೇಷ ಗೌರವವನ್ನು ನೀಡಲಾಗುತ್ತಿದೆ. ಮಹಿಳೆಗೆ ದೇವತೆಯ ಸ್ಥಾನ ನೀಡಿದ ದೇಶ ಭಾರತ. ಆದರೂ ಮಹಿಳೆಯ ಮೇಲಿನ ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಅಕ್ಷಮ್ಯವಾಗಿದ್ದು, ಇಂತಹ ದಿನಾಚರಣೆಗಳು ಇದಕ್ಕೆ ಪರಿಹಾರವನ್ನು ನೀಡುವಂತಾಗಲಿ ಎಂದರು. ರೋಣ ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಪಾಟೀಲ ಮಾತನಾಡಿ, ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದನ್ನು ಬಿಡಬೇಕು. ನಮ್ಮ ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಎಲ್ಲರಿಂದಲೂ ಗೌರವಿಸಲ್ಪಡುತ್ತಿದೆ. ಇದನ್ನು ಬೆಳೆಸಿಕೊಂಡು ನಮ್ಮತನವನ್ನು ಉಳಿಸಿಕೊಂಡು ಹೋಗುವ ಸಂಕಲ್ಪವನ್ನು ಇಂದಿನ ದಿನ ನಾವುಗಳು ಮಾಡಬೇಕಿದೆ. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸುವುದರ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ. ಈ ದಿನಾಚರಣೆ ಅಂತಹ ಕಾರ್ಯಕ್ಕೆ ವೇದಿಕೆಯಾಗಲಿ ಎಂದರು. ನರೇಗಲ್ಲ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿ ಧನ್ನೂರ ಮಾತನಾಡಿ, ಮಹಿಳೆ ತನ್ನ ಸ್ವಾತಂತ್ರ್ಯವನ್ನು ಎಂದಿಗೂ ಸ್ವೇಚ್ಛಾಚಾರ ಮಾಡಿಕೊಳ್ಳಬಾರದು. ಮಹಿಳಾ ಮಂಡಳಗಳಲ್ಲಿ ನಾವುಗಳು ಮಹಿಳೆಯರಿಗೆ ಭಾರತೀಯ ಸಂಸ್ಕೃತಿಯನ್ನು ಸಾರಿ ಹೇಳುವ ಕಾಲ ಬಂದಿದೆ. ನಮ್ಮತನದೊಂದಿಗೆ ನಾವುಗಳು ಸಾಧನೆಯತ್ತ ದಾಪುಗಾಲು ಹಾಕಬೇಕೆಂದರು.ಪಿಎಸ್‌ಐ ಐಶ್ವರ್ಯ ನಾಗರಾಳ ಮಾತನಾಡಿ, ಸಮಾಜ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಹೆಣ್ಣುಮಕ್ಕಳು ತಮ್ಮ ತಾಯಂದಿರಿಂದ ನೈತಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಜೀವನದಲ್ಲಿ ಒಮ್ಮೆ ದಾರಿ ತಪ್ಪಿದರೆ ಮುಂದೆ ಅದನ್ನೆಂದಿಗೂ ಸರಿಪಡಿಸಲು ಸಾಧ್ಯವಿಲ್ಲ. ಇದನ್ನು ಮಹಿಳೆ ಮನಗಾಣಬೇಕೆಂದರು. ಪ್ರಾಚಾರ್ಯೆ ಅನಸೂಯಾ ಪಾಟೀಲ ಹಾಗೂ ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ ಮಾತನಾಡಿ, ಮಹಿಳೆ ಸಮಾಜದ ಕಣ್ಣಾಗಿದ್ದಾಳೆ. ಅವಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದಕ್ಕೆಂದೇ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಗಾಯಕಿ ಗೀತಾ ಭೋಪಳಾಪೂರ ಅವರ ಸಂಗೀತ ಎಲ್ಲರ ಮನ ಸೂರೆಗೊಂಡಿತು. ನಿವೃತ್ತ ಶಿಕ್ಷಕಿ ರತ್ನಮ್ಮ ದಢೇಸೂರಮಠ ವಿಶೇಷ ಉಪನ್ಯಾಸ ನೀಡಿದರು. ಡಿ. ಎ. ಅರವಟಗಿಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯಶ್ರೀ ಗಂಗರಗೊಂಡ ನಿರೂಪಿಸಿದರು. ಅಕ್ಕಮ್ಮ ಬೆಟಗೇರಿ ಸ್ವಾಗತಿಸಿದರು. ಭಾರತಿ ಶಿರ್ಸಿ ವಂದಿಸಿದರು.