ಬೇಸಿಗೆ ದಿನಗಳಲ್ಲಿ ಕುಡಿವ ನೀರು ಪೋಲಾಗದಂತೆ ನೋಡಿಕೊಳ್ಳಿ: ಜಿಪಂ ಸಿಇಒ

KannadaprabhaNewsNetwork |  
Published : Mar 27, 2025, 01:07 AM IST
ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ವಿಶ್ವ ಜಲದಿನ ಕಾರ್ಯಕ್ರಮಕ್ಕೆ ಜಿ.ಪಂ.ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.

ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಮಹಮ್ಮದ್ ಹ್ಯಾರೀಸ್ ಸುಮೈರ್ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕುಡಿಯುವ ನೀರನ್ನು ಪೋಲಾಗದಂತೆ ನಿಗಾ ವಹಿಸಿದರೆ ಮಾತ್ರ ನೀರಿನ ಕೊರತೆಯನ್ನು ನಿಭಾಯಿಸಿಕೊಳ್ಳಬಹುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ತಿಳಿಸಿದರು.

ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವೀರಶೈವ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ವೀರಶೈವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಏ. 10ರವರೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಯಲಿದ್ದು, ಕೃಷಿ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಾಗುತ್ತದೆ. ಪ್ರತಿಯೊಬ್ಬರೂ ನೀರಿನ ನಿರ್ವಹಣೆಯ ಬಗ್ಗೆ ಕಾಳಜಿ ವಹಿಸುವಂತಾಗಬೇಕು. ಮನೆಯ ಕುಟುಂಬ ಸದಸ್ಯರಿಗೆ ನೀರಿನ ಮಹತ್ವ ಕುರಿತು ತಿಳಿಸಿಕೊಡುವಂತಾಗಬೇಕು. ಪ್ರಮುಖವಾಗಿ ಮಕ್ಕಳಲ್ಲಿ ನೀರು ಬಳಕೆ, ಪರಿಸರ ರಕ್ಷಣೆ ಮತ್ತಿತರ ವಿಚಾರಗಳ ಕುರಿತು ಪೋಷಕರು ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಮಾತನಾಡಿ, ಸಕಲ ಜೀವರಾಶಿಗಳಿಗೆ ನೀರು ಬಹುಮುಖ್ಯವಾಗಿದೆ. ಭೂ ಮಂಡಲದಲ್ಲಿ ಇರುವ ನೀರಿನ ಪ್ರಮಾಣದಲ್ಲಿ ಶೇ.97ರಷ್ಟು ಉಪ್ಪು ನೀರು ಇದ್ದು, ಶೇ3.ರಷ್ಟು ಮಾತ್ರ ಸಿಹಿ ನೀರು ಬಳಕೆಗೆ ಉಪಯುಕ್ತವಾಗಿದೆ. ಇದರಲ್ಲಿ ಕೇವಲ ಶೇ.0.07ರಷ್ಟು ನೀರು ಕುಡಿಯಲು ಬಳಕೆಯಾಗುತ್ತಿದೆ. ಉಳಿದ ನೀರು ಘನ ರೂಪದಿ ಹಿಮಪಾತಗಳಲ್ಲಿದೆ ಎಂದು ಅವರು ಹೇಳಿದರು.

ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಬರ ಎದುರಾಗಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನೀರನ್ನು ಅತಿಯಾಗಿ ಪೋಲು ಮಾಡದೆ ಅಗತ್ಯವಿರುವಷ್ಟು ಮಾತ್ರ ಬಳಸಬೇಕು ಎಂದು ತಿಳಿಸಿದರು.

ಭೂಮಿಯ ಮೇಲೆ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಎಲ್ಲಾ ಜೀವಿಗಳಿಗೂ ನೀರು ಅತ್ಯವಶ್ಯಕವಾಗಿದೆ. ಸಮುದ್ರಗಳು ಕಡಲತೀರ ಕೊರೆದು ಭೂಮಿಯನ್ನು ಅತಿಕ್ರಮಿಸುತ್ತಿವೆ. ಪ್ರಸ್ತುತದಲ್ಲಿ ಸಣ್ಣ-ಸಣ್ಣ ನದಿ, ಹಳ್ಳಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಸ್ತುತದಲ್ಲಿ ಕಾರ್ಖಾನೆಗಳಿಂದ ವಾಯುಮಾಲಿನ್ಯ ಉಂಟಾಗಿ ಓಜೋನ್ ಪದರಿಗೆ ರಂಧ್ರಗಳು ಬಿದ್ದು ಸೂರ್ಯನ ಶಾಖದಿಂದ ಹಲವಾರು ಪರಿಣಾಮ ಬೀರುತ್ತಿದೆ. ಗಿಡ ಮರಗಳನ್ನು ಬೆಳೆಸಬೇಕು. ಪ್ರಕೃತಿ ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಗಳು ಕೆರೆ-ನದಿಗಳನ್ನು ಸಂರಕ್ಷಿಸಲು ಹಲವಾರು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿವೆ. ತಮ್ಮ ಮನೆಯ ಅಕ್ಕ-ಪಕ್ಕದಲ್ಲಿ ನೀರು ಪೋಲಾಗುವುದು ಕಂಡುಬಂದಲ್ಲಿ ಅದನ್ನು ನಿಲ್ಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಜಲ ದಿನ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಎಚ್. ಇಂದೂಧರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವೈ.ರಾಮಚಂದ್ರ, ರವೀಂದ್ರ ನಾಯ್ಕ, ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷ ದರೂರು ಶಾಂತನಗೌಡ, ಸದಸ್ಯ ಮುದ್ದನಗೌಡ, ಕಾಲೇಜಿನ ಪ್ರಾಚಾರ್ಯ ಜಿ.ಮಲ್ಲನಗೌಡ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!