ಬಾಲ ಕಾರ್ಮಿಕ ಮುಕ್ತ ಜಿಲ್ಲೆಯಾಗಿಸಿ: ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ

KannadaprabhaNewsNetwork |  
Published : Jun 13, 2025, 02:43 AM IST
12ಕೆಡಿವಿಜಿ12, 13-ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ವಿಶ್ವ ಬಾಲ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಇಟ್ನಾಳ ಇದ್ದರು. | Kannada Prabha

ಸಾರಾಂಶ

ಬಾಲ ಕಾರ್ಮಿಕ ಮುಕ್ತ ದಾವಣಗೆರೆ ಜಿಲ್ಲೆಯನ್ನಾಗಿಸಲು ಸಮಾಜದ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ತಿಳಿಸಿದರು.

ವಿಶ್ವ ಬಾಲ ಕಾರ್ಮಿಕರ ದಿನಾಚರಣೆ । ವಿಶೇಷ ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಲ ಕಾರ್ಮಿಕ ಮುಕ್ತ ದಾವಣಗೆರೆ ಜಿಲ್ಲೆಯನ್ನಾಗಿಸಲು ಸಮಾಜದ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಪ್ರಗತಿ ಸ್ಪಷ್ಟವಾಗಿದೆ. ಆದರೆ, ಇನ್ನೂ ಪರಿಣಾಮಕಾರಿಯಾಗಿ ಬಾಲ, ಕಿಶೋರ ಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇದನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಕ್ಕಾಗಿ ಪ್ರಯತ್ನಗಳಿಗೆ ಮತ್ತಷ್ಟು ವೇಗ ನೀಡಬೇಕೆಂಬ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಶ್ವಾದ್ಯಂತ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು 2002ರಿಂದ ಪ್ರತಿ ವರ್ಷ ಜೂನ್ 12ರಂದು ಆಚರಿಸಲಾಗುತ್ತದೆ. ಜಗತ್ತಿನಲ್ಲಿ 160 ಮಿಲಿಯನ್‍ಗಿಂತ ಅಧಿಕ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿದ್ದಾರೆ. ಇದು ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಹಾನಿಯುಂಟು ಮಾಡುವಂತಹ ಕಾರ್ಯದಲ್ಲಿ ತೊಡಗುವುದಾಗಿದೆ. ಮಾಲೀಕರು ಸಹ ಬಾಲ ಕಾರ್ಮಿಕತೆ ಅಥವಾ ಬಾಲ ಕಾರ್ಮಿಕ ಕಾರ್ಯಗಳಿಗೆ ಉತ್ತೇಜಿಸುವ, ತೊಡಗಿಸಿಕೊಳ್ಳುವ ಕುರಿತು ಮಾಹಿತಿ ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಿ ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ನಮ್ಮ ಕೆಲಸ, ಕಾರ್ಯ ಕೇವಲ ಪ್ರಶಂಸೆಗೆ ಸೀಮಿತವಾಗದೇ, ಬಾಲಕಾರ್ಮಿಕ ನಿರ್ಮೂಲನೆಗೆ ಪ್ರತಿಯೊಬ್ಬರೂ ತಂಡೋಪ ತಂಡವಾಗಿ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಇಂದಿಗೂ ಅಲ್ಲಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹದಂತಹ ಪ್ರಕರಣ ಕಂಡು ಬರುತ್ತಿವೆ ಎಂದರು.

ಬಾಲ ಕಾರ್ಮಿಕ ಪದ್ದತಿ ವಿರೋಧ ಕುರಿತು ಪ್ರಬಂಧ ಸ್ಪರ್ಧೆ ವಿಜೇತ ಸರ್ಕಾರಿ ಶಾಲೆಯ ಹೇಮಾವತಿ, ಐಶ್ವರ್ಯ, ಸಂಜು ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತ ಕವನ, ಚಂದನ, ಹಜರತ್ ಗೆ ಬಹುಮಾನ ವಿತರಿಸಲಾಯಿತು. ಬಾಲ ಕಾರ್ಮಿಕರ ಅತಿ ಹೆಚ್ಚು 13 ಪ್ರಕರಣ ದಾಖಲಿಸಿಗ ಹರಿಹರದ ಕಾವ್ಯಾ ಅವರಿಗೆ ಸನ್ಮಾನಿಸಲಾಯಿತು. ಜೀತ ಪದ್ದತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಲಕಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸ್ನೇಹಾರಿಗೆ ಸನ್ಮಾನಿಸಲಾಯಿತು.

ಜಿಪಂ ಸಿಇಒ ಸುರೇಶ್ ಬಿ ಇಟ್ನಾಳ್, ಎಎಸ್ಪಿ ಜಿ.ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್‌.ಅರುಣಕುಮಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ನವೀನ ಮಠದ್, ಸಾಶಿಇ ಉಪ ನಿರ್ದೇಶಕ ಕೊಟ್ರೇಶ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಅವಿನಾಶ , ವಿವಿಧ ಸಂಘಟನೆ ಮುಖಂಡರು, ಕಾಲೇಜು ವಿದ್ಯಾರ್ಥಿಗಳಿದ್ದರು. ಡಾನ್ ಬಾಸ್ಕೋದ ಮಂಜುನಾಥ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.

ಪ್ರೌಢಶಾಲಾ ಹಂತದಲ್ಲಿ ಋತುಮಾನಕ್ಕೆ ಅನುಗುಣವಾಗಿ, ಬಡತನ ಬಾಲ್ಯವಿವಾಹ ಹಾಗೂ ಇನ್ನಿತರೆ ಕಾರಣಗಳಿಂದ ಜಿಲ್ಲೆಯಲ್ಲಿ ಒಟ್ಟು 1960 ಮಕ್ಕಳು ಮತ್ತು ಪ್ರಾಥಮಿಕ ಶಾಲೆಗಳಲ್ಲಿ ರಾಜ್ಯದಲ್ಲಿ ಶೇ.2.7ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸಾರ್ವಜನಿಕರು, ಸಂಘಟನೆ, ಇಲಾಖೆಗಳ ಸಹಕಾರದಿಂದ ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಜಾಗೃತಿ ಮೂಡಿಸುವುದರ ಜತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸೋಣ.

ಸುರೇಶ ಬಿ.ಇಟ್ನಾಲ್, ಸಿಇಒ, ಜಿಪಂ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ