ಯಲ್ಲಾಪುರ: ಅಧಿಕಾರಿಗಳಿಗೆ ಜನಪರವಾಗಿ ಕೆಲಸ ಮಾಡುವ ಮನೋಭಾವ ಕಡಿಮೆಯಾಗಿದೆ. ಜನರಿಂದ ದೂರು ಬಂದರೆ ಯಾವುದೇ ಕಾರಣಕ್ಕೂ ಸುಮ್ಮನಿರಲಾಗದು ಎಂದು ಶಾಸಕ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಇಲ್ಲಿಯ ತಾಪಂ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಷ್ಟೇ ದೊಡ್ಡ ಅಧಿಕಾರಿಯಿದ್ದರೂ ನೀವು ಪುಸ್ತಕದಲ್ಲೇ ಆಡಳಿತ ನಡೆಸುವ ಪರಿಪಾಟ ನಿಲ್ಲಬೇಕು ಎಂದರು.ಮೂರೂವರೆ ತಿಂಗಳಿನಿಂದ ನೀತಿಸಂಹಿತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರೆ ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸ್ಪಂದಿಸದೇ ಜನವಿರೋಧಿ ನೀತಿ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ. ನಿಮ್ಮ ಕಾರ್ಯಗಳು ಜನಪರವಾಗಿರಬೇಕು. ಜನಪ್ರತಿನಿಧಿಗಳು ನೀಡಿದ ಸಲಹೆ-ಸೂಚನೆಗಳನ್ನು ಸ್ವೀಕರಿಸಿ, ಆಡಳಿತ ವ್ಯವಸ್ಥೆ ಜನಪರವಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾ ರಂಗ ಕೂಡಿ ಕೆಲಸ ಮಾಡಿದಾಗ ಜನರ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯುತ್ತದೆ. ಖಾದ್ರಿ ಶಾಮಣ್ಣ ಅವರಂಥ ಪತ್ರಕರ್ತರು ಅವ್ಯವಹಾರದ ಬಗ್ಗೆ ಬರೆದಾಗ ಸರ್ಕಾರವೇ ಬೀಳುವಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತು ಎಂದರು.ಅಭಿವೃದ್ಧಿಗೆ ಒತ್ತು ನೀಡಬೇಕು. ನಮ್ಮ ಜಿಲ್ಲೆಯಲ್ಲಿ ೪ ತಿಂಗಳು ಮಳೆ ಇರುವುದರಿಂದ ಕೇವಲ ೮ ತಿಂಗಳಿನಲ್ಲಿ ಮಾತ್ರ ಕೆಲಸ ಪೂರೈಸಬೇಕಾಗುತ್ತದೆ. ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಸಿದ್ದಿಯೊಬ್ಬನ ಬಿಡಾರ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಅದಕ್ಕೆ ಕೇವಲ ₹೪೦೦೦ ಹೇಗೆ ನೀಡಿದ್ದೀರಿ? ೨ ದಿನದಲ್ಲಿ ಕಾನೂನಿನ ಪ್ರಕಾರವೇ ಉರುಳಿಬಿದ್ದ ಮನೆಗೆ ಸರ್ಕಾರದ ಮಿತಿಯಂತೆ ₹೯೦೦೦೦ ನೀಡಿ ಎಂದು ತಹಸೀಲ್ದಾರರಿಗೆ ಸೂಚಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ತಾಲೂಕಿನಲ್ಲಿ ೪ ಡೆಂಘೀ ಪ್ರಕರಣ ಪತ್ತೆಯಾಗಿದೆ. ಪ್ರತಿಯೊಬ್ಬ ನಾಗರಿಕನೂ ಅತ್ಯಂತ ಜಾಗರೂಕತೆ ವಹಿಸಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಹೆಚ್ಚಿದಂತೆ ಅಪಾಯ ಹೆಚ್ಚುವುದು. ನಮ್ಮಲ್ಲಿ ನುರಿತ ಎಲ್ಲ ವೈದ್ಯರಿದ್ದಾರೆ. ಕೆಲವು ಶಸ್ತ್ರಚಿಕಿತ್ಸೆ ಮಾಡುವ ಯಂತ್ರಗಳ ಕೊರತೆಯಿದೆ. ಅದು ಬಂದರೆ ಜನರಿಗೆ ಅನುಕೂಲ. ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ನೇಮಿಸುವಂತಾಗಬೇಕು ಎಂದರು.
ಎನ್‌ಆರ್‌ಇಜಿ, ಸಮಾಜ ಕಲ್ಯಾಣ, ಬಿಸಿಎಂ, ಅರಣ್ಯ ಇಲಾಖೆ, ಶಿಕ್ಷಣ, ತೋಟಗಾರಿಕೆ, ಕೃಷಿ, ಹೆಸ್ಕಾಂ, ಕೆಎಸ್‌ಆರ್‌ಟಿಸಿ, ಜಿಪಂ, ಕಂದಾಯ, ರಾಷ್ಟ್ರೀಯ ಹೆದ್ದಾರಿ, ಮೀನುಗಾರಿಕೆ, ತಾಪಂ ಪಶುಸಂಗೋಪನೆ, ಸಿಡಿಪಿಒ ಇಲಾಖೆ ಅಧಿಕಾರಿಗಳು ವರದಿ ನೀಡಿದರು. ಸರ್ವೇ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಕುರಿತು ಚರ್ಚೆ ನಡೆಯಿತು.ಕಂದಾಯ ಇಲಾಖೆಯ ಚರ್ಚೆಯ ಸಂದರ್ಭದಲ್ಲಿ ರೇಷನ್ ಕಾರ್ಡ್ ಇಲ್ಲದಿದ್ದರೆ ಮನೆ ನಂ. ಸಿಗುವುದಿಲ್ಲ. ಮನೆ ನಂ. ಇಲ್ಲದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ. ಇದು ಯಾವ ನ್ಯಾಯ ಎಂದು ಶಾಸಕರು ಪ್ರಶ್ನಿಸಿದರು.
ಕಳಚೆಯ ಭೂಕುಸಿತದಿಂದ ಹಾನಿಯುಂಟಾದವರಿಗೆ ಪರಿಹಾರ ಮತ್ತು ಸ್ಥಳಾಂತರ ಮಾಡಲು ವೈಜ್ಞಾನಿಕ ವರದಿಯ ಆಧಾರದ ಮೇಲೆ ಕೆಡಿಪಿ ಸಭೆಯಲ್ಲಿ ಠರಾವು ಮಾಡಿ, ಅನುಮತಿ ನೀಡಲಾಯಿತು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪಂಚಾಯತ್ ರಾಜ್ಯ ಮತ್ತು ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾಪಂ ಆಡಳಿತಾಧಿಕಾರಿ ಬಿ. ನಟರಾಜ, ತಹಸೀಲ್ದಾರ್ ತನುಜಾ ಸವದತ್ತಿ ಉಪಸ್ಥಿತರಿದ್ದರು. ತಾಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು.