ಬಂದ ಅವಕಾಶಗಳನ್ನು ಸಮರ್ಪಕವಾಗಿಸಿಕೊಳ್ಳಿ: ಡಾ.ಅಪ್ಪಾಜಿಗೌಡ

KannadaprabhaNewsNetwork |  
Published : Mar 20, 2024, 01:15 AM IST
19ಎಚ್ಎಸ್ಎನ್11ಎ : ಬೆಂಗಳೂರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಹಾಗೂ ವಾದ್ವಾನಿ ಫೌಂಡೇಶನ್ ಮಾಸ್ಟರ್ ಟ್ರೈನರ್ ಸ್ವಾತಿಪುತ್ರನ್ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.  | Kannada Prabha

ಸಾರಾಂಶ

ಉದ್ಯೋಗ ಮನುಷ್ಯ ಲಕ್ಷಣಂ ಎನ್ನುವ ಹಾಗೆ ಇಂದು ಉದ್ಯೋಗ ಹೆಣ್ಣು-ಗಂಡು ಎನ್ನುವಂತಿಲ್ಲ ಎಲ್ಲರಿಗೂ ಬೇಕು. ಸಮಾನತೆಯ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಪಡೆದುಕೊಳ್ಳುವ ಗುರಿ ಇರಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಅವಕಾಶ ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲಿ ಅದನ್ನು ಉತ್ತಮ ರೀತಿ ಬಳಸಿಕೊಳ್ಳಬೇಕು ಎಂದು ಬೆಂಗಳೂರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಅಭಿಪ್ರಾಯಪಟ್ಟರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಾದ್ವಾನಿ ಫೌಂಡೇಷನ್ ಸಹಭಾಗಿತ್ವದಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನಲ್ಲಿ ಫೆ. ೧೮ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ ಹಾಗೂ ಬೋಧಕರಿಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾಭ್ಯಾಸ ಮಾತ್ರ ನೀಡುವುದಲ್ಲದೆ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಆದ್ದರಿಂದ ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಿವೆ. ಇಂದು ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಅವುಗಳನ್ನು ಪಡೆದುಕೊಳ್ಳುವ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಶೈಕ್ಷಣಿಕ ಡೀನ್ ಪ್ರೊ. ರಾಜು ಡಿ.ಎಎಸ್, ಉದ್ಯೋಗ ಮನುಷ್ಯ ಲಕ್ಷಣಂ ಎನ್ನುವ ಹಾಗೆ ಇಂದು ಉದ್ಯೋಗ ಹೆಣ್ಣು-ಗಂಡು ಎನ್ನುವಂತಿಲ್ಲ ಎಲ್ಲರಿಗೂ ಬೇಕು. ಸಮಾನತೆಯ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಪಡೆದುಕೊಳ್ಳುವ ಗುರಿ ಇರಬೇಕು. ಶಿಕ್ಷಣದ ಜೊತೆ ಜೊತೆಯಲ್ಲಿ ಉದ್ಯೋಗದ ಸಂಬಂಧಿ ತರಬೇತಿ ನೀಡುವ ಸರ್ಕಾರದ ಈ ಕಾರ್ಯಾಗಾರ ಯಶಸ್ವಿಯಾಗಬೇಕು ಎಂದು ಹೇಳುತ್ತಾ, ಕಾಲೇಜು ನಡೆದು ಬಂದ ದಾರಿಯ ಸವಿಸ್ತಾರ ಮಾಹಿತಿ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಡಾ. ಎಂ.ಬಿ. ಇರ್ಷಾದ್ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಯ್ಯ ಮುಕುತಿ ಎಂಬಂತೆ ಕಲಿತದ್ದು ಎಂದು ಅಳಿಸುವುದಿಲ್ಲ. ವಿವಿಧ ಕಾಲೇಜಿನಿಂದ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿರುವ ಅಧ್ಯಾಪಕರು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳ ಗಮನ ಸೆಳೆಯಬೇಕು ಎಂದು ಹೇಳಿದರು.

ಕಲಾಶ್ರೀ ವಾರ್ಷಿಕ ಸಂಚಿಕೆಯ ಸಂಪಾದಕ ಡಾ. ದಿನೇಶ್ ಕೆ.ಎಸ್ ಮಾತನಾಡಿ, ಸೃಜನಶೀಲ ಬರವಣಿಗೆಯನ್ನು ಪ್ರೋತ್ಸಾಹಿಸಲು ಕಲಾಶ್ರೀ ವಾರ್ಷಿಕ ಸಂಚಿಕೆಯನ್ನು ಹೊರತರಲಾಗುತ್ತದೆ. ವಿದ್ಯಾರ್ಥಿಗಳು ಇದನ್ನು ಉತ್ತಮ ವೇದಿಕೆಯನ್ನಾಗಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಕಲಾಶ್ರೀ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬೆಂಗಳೂರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಹಾಗೂ ವಾದ್ವಾನಿ ಫೌಂಡೇಷನ್ ಮಾಸ್ಟರ್ ಟ್ರೈನರ್ ಸ್ವಾತಿ ಪುತ್ರನ್ ರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಾಗಾರದಲ್ಲಿ ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ. ಮುರುಳೀಧರ್ ಸ್ವಾಗತಿಸಿದರು. ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ ವಂದಿಸಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮೈಸೂರು ವಲಯ ವಿಶೇಷಾಧಿಕಾರಿ ಅರುಣ್, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ. ರತ್ನ ವೈ.ಡಿ, ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ಪಾರ್ಥೇಶ್ ಕೆ,ವಿ. ಶಾಂತ ಪಿ.ಆರ್., ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕರಾದ ಮಂಜುನಾಥ್, ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಧ್ಯಾಪಕ ಡಾ. ರಮೇಶ್ ವಿ, ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಡಾ. ವನಿತಾ, ಕನ್ನಡ ವಿಭಾಗದ ಅಧ್ಯಾಪಕರಾದ ಪ್ರೊ. ಪ್ರಮೀಳಾ, ಅನಿತ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಶ್ಮಿ ಎ.ವಿ., ಶೃತಿ, ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಾಪಕಿ ಡಾ. ಸವಿತ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಮಾಲತಿ ಬಿ.ಆರ್. ಪ್ರಾರ್ಥನೆ ಮಾಡಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ತರಬೇತಿ ಪಡೆಯಲು ಅಧ್ಯಾಪಕರು, ಕಾಲೇಜಿನ ವಿವಿಧ ವಿಭಾಗದ ಅಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ