ಶಿರಹಟ್ಟಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಸೆ.೧೭ರಿಂದ ಅ.೨ರ ಗಾಂಧಿ ಜಯಂತಿ ವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಕರೆ ನೀಡಿದರು.
ಸೇವಾ ಪರಮೋಧರ್ಮ ಸೇವೆಯೇ ಪರಮಧರ್ಮ ಎಂಬ ಮನೋಭಾವನೆಯಲ್ಲಿ ಕಾರ್ಯಕ್ರಮ ಜರುಗಬೇಕು.
ಸೇವಾ ಪಾಕ್ಷಿಕ ಅಭಿಯಾನದ ಅಡಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ತಾಯಿ ಹೆಸರಿನಲ್ಲಿ ಒಂದು ಸಸಿ, ಚಿತ್ರಕಲಾ ಕಾರ್ಯಕ್ರಮ ದೇಶಾದ್ಯಂತ ಜರುಗಲಿವೆ. ಆದ್ದರಿಂದ ಕಾರ್ಯಕರ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ವೀಕ್ಷಣೆ ಮತ್ತು ಮಂಡಲವಾರು ಸಂಘಟನಾತ್ಮಕ ಕೆಲಸ ಕಾರ್ಯಗಳ ಪ್ರಗತಿ ಅಭಿನಂದನೀಯ. ಜಿಎಸ್‌ಸ್ಟಿ ಸಧಾರಣೆಯಿಂದ ದೇಶವಾಸಿಗಳಿಗೆ ಲಭಿಸುವ ಪ್ರಯೋಜನದ ಕುರಿತು ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಷ್ಟೆ ಅಲ್ಲದೆ ದೀನ್ ದಯಾಳ ಉಪಾಧ್ಯಾಯ, ಲಾಲ್ ಬಹದ್ದೂರ ಶಾಸ್ತ್ರೀ ಮತ್ತು ಗಾಂಧಿ ಜಯಂತಿ ಇರುವುದರಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದೇಶಕ್ಕಾಗಿ ಶ್ರಮಿಸಿದ ಗಣ್ಯರ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು, ಇದರ ಯಶಸ್ಸಿಗೆ ಸಹಕರಿಸಬೇಕು. ಅಭಿಯಾನವು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಪಕ್ಷಾತೀತವಾಗಿ ಸಮುದಾಯಗಳನ್ನು ಭಾಗಿಯಾಗಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.