ರೋಣ: ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಚುನಾವಣಾ ಸಿದ್ಧತೆ ಪ್ರಾರಂಭಗೊಂಡಿದ್ದು, ಮೊದಲ ಹಂತವಾಗಿ ಮತದಾರರ ಪಟ್ಟಿ ರಚನೆಗೆ ಈಗಾಗಲೇ ಪ್ರಾರಂಭಿಸಲಾಗಿದ್ದು, ಪದವೀಧರ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣಾಧಿಕಾರಿ ಬಸನಗೌಡ ಕೊಟ್ಟೂರ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಬುಧವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಹಸೀಲ್ದಾರ್ ನಾಗರಾಜ ಕೆ., ತಾಲೂಕಿನಲ್ಲಿರುವ ಎಲ್ಲ ಪದವಿ ಕಾಲೇಜುಗಳು, ತಮ್ಮಲ್ಲಿ ಪದವಿ ಪೂರೈಸಿರುವ ವಿದ್ಯಾರ್ಥಿಗಳನ್ನು, ಸರ್ಕಾರಿ ನೌಕರರು ತಮ್ಮ ಕಚೇರಿಯಲ್ಲಿನ ಪದವೀಧರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವಲ್ಲಿ ಸಹಕರಿಸಬೇಕು. ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರು ಸ್ಥಳೀಯ ನಿವಾಸಿಗಳಾಗಿರಬೇಕು ಮತ್ತು 2022 ಅಕ್ಟೋಬರ್ 31ರ ಒಳಗೆ ಪದವಿ ಪೂರೈಸಿರಬೇಕು. ಮತದಾರರ ಪಟ್ಟಿಗೆ ಸೇರ್ಪಡೆ ಆಗಲು ಫಾರಂ ನಂಬರ್ 18 ಭರ್ತಿ ಮಾಡಿ , ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಪದವಿಯ ಅಂಕಪಟ್ಟಿ ಮತ್ತು ಪಾಸಿಂಗ್ ಸರ್ಟಿಫಿಕೇಟ್ ಜೆರಾಕ್ಸ್ ಪ್ರತಿಗಳನ್ನು ಚುನಾವಣಾ ವಿಭಾಗಕ್ಕೆ ಸಲ್ಲಿಸಬೇಕು ಎಂದರು.ಸಭೆಯಲ್ಲಿ ರೋಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಂದಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಪಿಎಸ್‌ಐ ಪ್ರಕಾಶ ಬಣಕಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎಂ. ನಾಯ್ಕರ, ನೌಕರರ ಸಂಘದ ಅಧ್ಯಕ್ಷ ಎಸ್.ಜಿ. ದಾನಪ್ಪಗೌಡ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಡಿ. ಗಾಣಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.