ಬಳ್ಳಾರಿ: ಕೃತಕ ಬುದ್ಧಿಮತ್ತೆಯ ಈ ಕಾಲಮಾನದಲ್ಲಿ ಅನೇಕ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದು ಸಾಂಪ್ರದಾಯಿಕ ಕಲಿಕೆಯ ಜೊತೆಗೆ ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡದೇ ಹೋದರೆ ಭವಿಷ್ಯದಲ್ಲಿ ಉದ್ಯೋಗ ಉಳಿಸಿಕೊಳ್ಳುವ ಸಮಸ್ಯೆಗಳು ಎದುರಾಗುವ ಅಪಾಯಗಳಿವೆ ಎಂದು ಬೆಂಗಳೂರಿನ ಲಿವಿ ಲರ್ನಿಂಗ್ ಸೆಂಟರ್‌ನ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಪ್ರೊ. ವಿನೋದ್ ಕುಮಾರ್ ಮೂರ್ತಿ ತಿಳಿಸಿದರು.
ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಕೌಶಲ್ಯತೆಯನ್ನು ರೂಢಿಸಿಕೊಳ್ಳಬೇಕು. ಬದಲಾಗುತ್ತಿರುವ ಕಾಲಘಟ್ಟಗಳಲ್ಲಿ ಶಿಕ್ಷಣ, ಉದ್ಯೋಗ ಸೇರಿದಂತೆ ನಾನಾ ವಲಯಗಳಲ್ಲಿ ಕೌಶಲ್ಯತೆಗೆ ಹೆಚ್ಚು ಮಹತ್ವವಿದೆ. ಸಾಂಪ್ರದಾಯಿಕ ಕಲಿಕೆಗಷ್ಟೇ ಸೀಮಿತಗೊಂಡರೆ ಉದ್ಯೋಗ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ ಸಾಲಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಔದ್ಯೋಗಿಕ ರಂಗದಲ್ಲಿ ವಿಷಯ ಜ್ಞಾನದ ಜೊತೆಗೆ ಕೌಶಲ್ಯ ಆಧಾರಿತ ಕಲಿಕೆಗೆ ಒತ್ತು ನೀಡಿದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಸಂಯೋಜಕ ಪ್ರೊ. ಉದಯ್ ಕುಮಾರ್ ಖಡ್ಕೆ ಅವರು 7 ದಿನಗಳ ವಿದ್ಯಾರ್ಥಿಗಳ ಕಲಿಕಾ ಪುಷ್ಟೀಕರಣ ಶಿಬಿರದ ರೂಪುರೇಷೆಗಳು ಹಾಗೂ ಮಹತ್ವದ ಕುರಿತು ವಿವರಿಸಿದರು.
ಚೆನ್ನೈನ ಸಿಎಸ್‌ಐಆರ್-ಎನ್‌ಎಂಎಲ್ ಮದ್ರಾಸ್ ಕೇಂದ್ರದ ಮಾಜಿ ವಿಜ್ಞಾನಿ ಪ್ರೊ. ಟಿ.ವಿ ವಿಜಯಕುಮಾರ್, ತಾಂತ್ರಿಕ ಗೋಷ್ಠಿಯ ಸಹಾಯಕ ವೃಂದದ ಪ್ರೊ ಜೀಲಾನ್‌ಬಾಷಾ, ಪ್ರೊ. ಸದ್ಯೋಜಾತಪ್ಪ ಸಮಾರಂಭದ ವೇದಿಕೆಯಲ್ಲಿದ್ದರು.ಡಾ.ನಾಗಭೂಷಣ್ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಯ ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಎಂಸಿಎ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿವಿಯ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು.