ಗದಗ: ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು, ಹಾಗೇನೆ ಕನ್ನಡ ನಾಡು, ನುಡಿ, ಸಾಹಿತ್ಯದ ಉಗಮ, ವಿಕಾಸ, ಮಹತ್ವ ಪ್ರಯೋಜನ ತಿಳಿಯದವರು ಕನ್ನಡ ನಾಡು, ನುಡಿಯ ಬಗ್ಗೆ ಹೆಮ್ಮೆ ಪಡಲಾರರು. ಇಂದಿನ ಯುವ ಜನಾಂಗಕ್ಕೆ ಕನ್ನಡ ನಾಡು, ನುಡಿಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕೆಎಲ್ಇ ಸಂಸ್ಥೆಯ ಜೆ.ಟಿ. ಪಪೂ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಎನ್.ಎನ್. ಗೊರವರ ಹೇಳಿದರು.
ಪ್ರಾ.ಪಿ.ಜಿ.ಪಾಟೀಲ ಮಾತನಾಡಿ, ಕನ್ನಡಿಗರಾದ ನಾವು ನಮ್ಮ ಭಾಷೆಯ ಮೇಲೆ ಅಭಿಮಾನ ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇದೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಸಿಗುವಂತಾಗಬೇಕು. ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಿ ಕನ್ನಡ ಅಭಿಮಾನ ಅರಳಿಸುವುದು ಅಗತ್ಯ ಎಂದು ತಿಳಿಸಿದರು.
ಈ ವೇಳೆ ಪಪೂ ಮಹಾವಿದ್ಯಾಲಯದ ಪ್ರಾ.ಪ್ರೊ. ಎಸ್.ಬಿ. ಹಾವೇರಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀಮಾ ಕೊಪ್ಪಳ, ಚಿತ್ರಲೇಖ ಹಿರೇಮಠ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕರಾದ ಮಹಾಂತೇಶ ಮಡಿಕೇರಿ, ಶ್ರುತಿ ಮ್ಯಾಗೇರಿ ನಿರೂಪಿಸಿದರು.