ಹಾವೇರಿ: 1995ರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಕನ್ನಡ ಶಾಲೆಗಳನ್ನು ಗುರುತಿಸಿ, ರಾಜ್ಯ ಸರ್ಕಾರದ ಅನುದಾನಕ್ಕೊಳಪಡಿಸಿ ವೇತನ ಅನುದಾನ ನೀಡಬೇಕು ಎಂದು ಅಖಿಲ ಕರ್ನಾಟಕ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದಿಂದ ಗುರುವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಲಾಯಿತು.
ಖಾಸಗಿ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಸಿದ್ದರಾಜ ಕಲಕೋಟಿ ಮಾತನಾಡಿ, ಈ ಹಿಂದೆ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರಿಗೆ ಆಸರೆಯಾಗಿದ್ದ ಆರ್‌ಟಿಇ (ಶಿಕ್ಷಣ ಹಕ್ಕು ಕಾಯಿದೆ)ಯನ್ನು ಪುನಃ ಜಾರಿಗೆ ತರಬೇಕು. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ಮಾರ್ಗಸೂಚಿಗಳನ್ನು ಸರಳೀಕರಣ ಮಾಡಬೇಕು. ಆರ್‌ಟಿಇ ಕಾಯಿದೆ ಅಡಿಯಲ್ಲಿ ಆಯ್ಕೆಯಾದ ಶಾಲೆಗಳಿಗೆ ಬರಬೇಕಾದ ಶುಲ್ಕ ಮರುಪಾವತಿ ಹಣವನ್ನು ಈ ಕೂಡಲೇ ಎಲ್ಲ ಶಾಲೆಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಮಾಳಗಿ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಖಾಸಗಿ ಶಾಲೆಗಳಿಗೆ ಅನುದಾನ ಮೀಸಲಿಡುವ ಪ್ರಸ್ತಾಪ ಮಾಡಿಲ್ಲ. ಇರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುರಿಗೆಪ್ಪ ಶೆಟ್ಟರ, ಸುರೇಶ ಬಿಷ್ಟನಗೌಡ್ರ, ತಿಪ್ಪೇಸ್ವಾಮಿ ಹೊಸಮನಿ, ಮುತ್ತಯ್ಯ ಕಿತ್ತೂರಮಠ, ಮಂಜುನಾಥ ಮಡಿವಾಳರ ಹಾಗೂ ಕರ್ಜಗಿ, ಬಸಾಪುರ, ಹೊಸರಿತ್ತಿ, ಮೇವುಂಡಿ, ರಾಣಿಬೆನ್ನೂರು, ಹಾನಗಲ್ಲ ಸೇರಿದಂತೆ ವಿವಿಧ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಸಿಬ್ಬಂದಿ ಪಾಲ್ಗೊಂಡಿದ್ದರು.