ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾದೇಶ ಪ್ರಜೆಗಳ ವಿರುದ್ಧ ಆಪರೇಷನ್ ಮುಕ್ತ ಹೆಸರಿನಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಕಳೆದೆರಡು ದಿನಗಳಲ್ಲಿ 105 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರ 58 ವಿಶೇಷ ತಂಡಗಳು 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶನಿವಾರ 53 ಮಂದಿ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಲಾಗಿತ್ತು. ಭಾನುವಾರವೂ ಪರಿಶೀಲನಾ ಕಾರ್ಯ ನಡೆಸಿದ ಪರಿಣಾಮ ಮತ್ತೆ 52 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವೈಟ್‌ಫೀಲ್ಡ್ ವಿಭಾಗದಲ್ಲಿ 62 ಮಂದಿ:ವೈಟ್‌ಫೀಲ್ಡ್ ವಿಭಾಗದಲ್ಲಿ 35 ವಿಶೇಷ ತಂಡಗಳು 1,035 ಜನರನ್ನು ತಪಾಸಣೆ ನಡೆಸಿ 62 ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿದರೆ, ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ 23 ವಿಶೇಷ ತಂಡಗಳು 1,909 ಜನರನ್ನು ತಪಾಸಣೆ ನಡೆಸಿ, 43 ಅಕ್ರಮ ವಲಸಿಗರು ಪತ್ತೆ ಮಾಡಿವೆ. ಎಲ್ಲರನ್ನೂ ವಶಕ್ಕೆ ಪಡೆದು ನೆಲಮಂಗಲದ ಸೊಂಡೆಕೊಪ್ಪ ಬಳಿಯ ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿದೆ. ವಲಸಿಗರ ಕೇಂದ್ರ ಭರ್ತಿಯಾಗಿರುವ ಕಾರಣ, ಕೆಲ ಸ್ವಯಂ ಸೇವಾ ಸಂಸ್ಥೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿ ಠಾಣಾ ವ್ಯಾಪ್ತಿ ಶೆಡ್‌ಗಳಲ್ಲಿ ತಪಾಸಣೆ ನಡೆಸಿ, ಶಂಕಿತ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಲಾಯಿತು. 2,944 ಮಂದಿಯನ್ನು ವಿಚಾರಣೆ ನಡೆಸಿ, ಒಟ್ಟು 105 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮಾಹಿತಿಗೆ ನೀಡಲಾಗಿದೆ. ಅವರೊಂದಿಗೆ ಸಮಾಲೋಚನೆ ನಡೆಸಿ, ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಾಂಗ್ಲಾದೇಶದವರು ಅಕ್ರಮವಾಗಿ ನೆಲಸಲು ಅವಕಾಶ ಮಾಡಿಕೊಟ್ಟಿರುವ ಹಾಗೂ ಕೆಲಸಕ್ಕೆ ನೇಮಿಸಿಕೊಂಡಿರುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ ಮತ್ತು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ವಿವರಗಳ ಡಿಜಿಟಲೀಕರಣ:
ವಶಕ್ಕೆ ಪಡೆಯಲಾದವರ ವೀಸಾ, ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯತೆಯ ಅಧಿಕೃತ ದಾಖಲೆಗಳ ಪರಿಶೀಲನೆ ನಡೆಸಿದಾಗ, 52 ಮಂದಿ ಯಾವುದೇ ಕಾನೂನು ಬದ್ಧ ವೀಸಾ ಅಥವಾ ಭಾರತೀಯ ನಾಗರಿಕತ್ವದ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದಿರುವುದು ಕಂಡು ಬಂದಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಸಲುವಾಗಿ ಸಮುದಾಯ ಭವನ, ಆವರಣ ಸೇರಿ ಕೆಲವೆಡೆ ತಪಾಸಣಾ ಕಾರ್ಯ ನಡೆಸಲಾಯಿತು. ಪ್ರತಿಯೊಬ್ಬರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪಡೆದು ಪರಿಶೀಲಿಸಿ, ಎಲ್ಲರ ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.