ಬಳ್ಳಾರಿ: ಆತ್ಮನಿರ್ಭರ ಭಾರತದ ಮೂಲಕ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಯುವಕರು ತಮ್ಮ ಪ್ರತಿಭೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜಕ್ಕೆ ಹೊಸ ದಿಕ್ಕು ನೀಡಬೇಕು ಎಂದು ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ ಗೆಹಲೋತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನದ ಅಗತ್ಯತೆ:
ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವುದರ ಜತೆಗೆ ಪರಿಸರ ಪ್ರಚಾರ ಮತ್ತು ಸಂರಕ್ಷಣೆಯ ಕಡೆಗೆ ಸಕ್ರಿಯ ಪ್ರಯತ್ನ ಮಾಡಬೇಕು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿರುವಂತೆ ರಾಷ್ಟ್ರಗಳು ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಮಿಸಲ್ಪಟ್ಟಿವೆ ಎಂಬ ಈ ಚಿಂತನೆ ಮನಸ್ಸಿನಲ್ಲಿಟ್ಟುಕೊಂಡು ವಿಶ್ವವಿದ್ಯಾಲಯಗಳನ್ನು ಶ್ರೇಷ್ಠತೆಯ ಸಂಸ್ಥೆಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿರಬೇಕು. ಇದಕ್ಕಾಗಿ ವಿಶ್ವವಿದ್ಯಾಲಯಗಳನ್ನು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡುವ ಮತ್ತು ಅಂತರ-ಶಿಸ್ತಿನ ಹಾಗೂ ಅಂತರ-ವಿಶ್ವವಿದ್ಯಾಲಯ ಸಹಯೋಗ ಉತ್ತೇಜಿಸುವ ಕಡೆಗೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು. ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವುದು. 21 ನೇ ಶತಮಾನದ ತೀರಾ ಅಗತ್ಯದ ಕಾರ್ಯಗಳಾಗಿವೆ. ಇದಕ್ಕಾಗಿ ಕಲಿಕೆಯ ಪ್ರಕ್ರಿಯೆ ಮುಂದುವರಿಸಬೇಕು. ಯುವಪೀಳಿಗೆ ಉದ್ಯೋಗಾಕಾಂಕ್ಷಿಯಾಗಿ ಬದಲಾಗಿ ಉದ್ಯೋಗ ಒದಗಿಸುವವರ ಪಾತ್ರ ನಿರ್ವಹಿಸಬೇಕು ಎಂದರು.ಭಾರತ ಜಗತ್ತಿನ ಶಕ್ತಿಶಾಲಿ ಆರ್ಥಿಕತೆ ಕೇಂದ್ರ:
ಘಟಿಕೋತ್ಸವವು ಕೇವಲ ಒಂದು ಸಮಾರಂಭವಲ್ಲ, ಇದು ಪ್ರತಿ ವಿದ್ಯಾರ್ಥಿಯ ಪರಿಶ್ರಮ, ಶಿಸ್ತಿನ ಜೀವನ ಮತ್ತು ನಿಶ್ಚಯ ಹಾದಿಯ ಫಲಶ್ರುತಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗಳು ಭವಿಷ್ಯದ ಪೀಳಿಗೆಗೆ ಪ್ರೇರಣೆಯಾಗಬೇಕು.
ಪೋಷಕರ ತ್ಯಾಗ ಮತ್ತು ಅಚಲ ಬೆಂಬಲವು ಮಕ್ಕಳ ಯಶಸ್ಸಿನ ಆಧಾರವಾಗಿದೆ. ಶಿಕ್ಷಕರ ಬೋಧನೆ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಇಂದಿನ ಯುವಕರು ತಮ್ಮ ಕನಸು ಸಾಕಾರಗೊಳಿಸುತ್ತಿದ್ದಾರೆ ಎಂದ ಪ್ರೊ. ಅವಿನಾಶ್ ಚಂದ್ರ ಪಾಂಡೆ ಅವರು, ಉತ್ತಮ ವೃತ್ತಿ ಜೀವನ, ಅರ್ಥಪೂರ್ಣ ಬದುಕು ಮತ್ತು ಮಾನವೀಯ ಸೇವೆಯ ದಾರಿಯಲ್ಲಿ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು, ವಿಶ್ವವಿದ್ಯಾಲಯದಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕೈಗೊಂಡಿರುವ ಅನೇಕ ಕಾರ್ಯಕ್ರಮ, ಮೂಲ ಸೌಕರ್ಯಗಳ ಒದಗಿಸುವುಕೆ ಹಾಗೂ ಭವಿಷ್ಯದಲ್ಲಿ ವಿವಿಯ ಅಭಿವೃದ್ಧಿಯ ಯೋಜನೆಗಳ ಕುರಿತು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜ.ಸಿ., ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮುಂತಾದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಗೌರವ ಡಾಕ್ಟರೇಟ್ ಪ್ರದಾನ:ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಜರುಗಿದ 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇರ್ಫಾನ್ ರಜಾಕ್, ಡಾ. ವಸುಂಧರಾ ಭೂಪತಿ ಹಾಗೂ ಬಾವಿಹಳ್ಳಿ ನಾಗನಗೌಡ ಅವರಿಗೆ ರಾಜ್ಯಪಾಲ ಥಾವರಚಂದ ಗೆಹಲೋತ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ವಿವಿಧ ವಿಭಾಗಗಳ ಒಟ್ಟು 59 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರ ಪಡೆದುಕೊಂಡರು.
ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಹಂಸ.ಎನ್ ಅವರು 4 ಚಿನ್ನದ ಪದಕ ಪಡೆದುಕೊಂಡರೆ, ವಿವಿಯ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ರಾಜೇಶ್ವರಿ 3 ಚಿನ್ನದ ಪದಕ ಪಡೆದುಕೊಂಡರು. ಭೌತಶಾಸ್ತ್ರ ವಿಭಾಗದ ಮನೋಜ್, ರಸಾಯನಶಾಸ್ತ್ರ ವಿಭಾಗದ ಸುಹಾನ ತಸ್ಲೀಮ್, ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಶಿಲ್ಪ, ಬಳ್ಳಾರಿಯ ಬಿಬಿಸಿ ಕಾಲೇಜ್ ನ ಬಿಕಾಂ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಮತ್ತು ವೀರಶೈವ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ಮಹಮ್ಮದ್ ನಕೀಬಲಿ ಇವರುಗಳು 2 ಚಿನ್ನದ ಪದಕ ರಾಜ್ಯಪಾಲರಿಂದ ಪಡೆದುಕೊಂಡರು.