ಬೆಂಗಳೂರು : ತಂಬಾಕು ಹಾಗೂ ನಿಕೋಟಿನ್‌ ಅಂಶ ಇರುವ ಗುಟ್ಕಾ ಅಥವಾ ಪಾನ್‌ ಮಸಾಲ ಉತ್ಪಾದನೆ, ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶದಿಂದ ಅಡಕೆ ಬೆಲೆ ಹಾಗೂ ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿರುವ ಆರೋಗ್ಯ ಸಚಿವ ಯು.ಟಿ. ಖಾದರ್‌, ಸರ್ಕಾರ ಈ ಆದೇಶವನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಆದೇಶ ಮಾಡಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಹ ಇದನ್ನು ಸಮರ್ಥಿಸಿದ್ದಾರೆ. ಹೀಗಾಗಿ ನಿಷೇಧ ಹಿಂಪಡೆಯುವುದಿಲ್ಲ. ಮೂರು ತಿಂಗಳು ಕಾದು ನೋಡಿ, ಇದರಿಂದ ಅಡಕೆ ಬೆಲೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ತೀರ್ಮಾನದಿಂದ ಅಡಕೆ ಬೆಲೆ ಹೆಚ್ಚಾಗುತ್ತದೆ. ಇದರಿಂದ ಅಡಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಲಾಭವಾಗುತ್ತದೆಯೇ ಹೊರತು ಸಮಸ್ಯೆ ಆಗುವುದಿಲ್ಲ. ಗುಟ್ಕಾಗೆ ನಮ್ಮ ದೇಶದ ಅಡಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ನೇಪಾಳ, ಬಾಂಗ್ಲಾದಿಂದ ಆಮದು ಮಾಡಿ ಬಳಕೆ ಮಾಡುತ್ತಾರೆ. ಗುಟ್ಕಾದಲ್ಲಿ ನಿಕೋಟಿನ್, ತಂಬಾಕು ನಿಷೇಧದಿಂದ ನಮ್ಮ ಅಡಕೆಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.


ಸರ್ಕಾರದ ಆದೇಶದಿಂದ ಅಡಕೆ ಬೆಳಗಾರರಿಗೆ ಯಾವುದೇ ತೊಂದರೆ ಇಲ್ಲ. ಮಾಡಿರುವ ಆದೇಶವನ್ನು ವಾಪಸು ಪಡೆದಿಲ್ಲ. ನಮ್ಮ ಇಲಾಖೆ ಹಾಗೂ ಸರ್ಕಾರ ಅಡಕೆ‌ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಹಿಂದೆಯೂ ಅಡಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಹೇಳಿದರು.

3 ತಿಂಗಳಲ್ಲಿ ಫಲಿತಾಂಶ :

ಈ ಹಿಂದೆ ಗುಟ್ಕಾ ನಿಷೇಧ ಮಾಡುವಾಗ ಅಡಕೆ ಬೆಳೆಗಾರರು ದರ ಇಳಿಕೆ ಆಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆಗಲೂ ಅಡಕೆ ಬೆಲೆ ಕುಸಿತ ಆಗುವುದಿಲ್ಲ‌ ಎಂದಿದ್ದೆವು‌. ಮೂರು ತಿಂಗಳು ಆದ ಬಳಿಕ ಅಡಕೆ ಬೆಲೆ ಹೆಚ್ಚಾಗಿತ್ತು. ಹೀಗಾಗಿ ಈಗಲೂ ಮೂರು ತಿಂಗಳು ಅವಕಾಶ ಕೊಟ್ಟು ನೋಡಿ. ಫಲಿತಾಂಶ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಯು.ಟಿ. ಖಾದರ್‌ ಹೇಳಿದರು.

ಉತ್ತಮ ನಿರ್ಧಾರ ಎಂದಿರುವ ಸಿಎಂ:

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನವಾಗಿದೆ. ಆದರೆ ಅಡಕೆ ಬೆಳೆಗಾರರಿಗೂ ತೊಂದರೆ ಆಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿವಿ ಮಾತು ಹೇಳಿದ್ದಾರೆ ಎಂದು ಖಾದರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಕೋಟಿನ್‌ ಅಂಶ ಮಾತ್ರ ನಿಷೇಧ-ಶಿವಗಂಗಾ:

ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಗುಟ್ಕಾ ಕುರಿತ ಸರ್ಕಾರದ ಆದೇಶದಿಂದ ಗೊಂದಲ ಆಗಿದೆ. ಸರ್ಕಾರ ಅಡಕೆ ಅಥವಾ ಪಾನ್‌ ಮಸಾಲಾ ನಿಷೇಧ ಮಾಡಿಲ್ಲ. ಬದಲಿಗೆ ಅಡಕೆ, ಪಾನ್‌ ಮಸಾಲಾದಲ್ಲಿನ ನಿಕೋಟಿನ್‌ ಹಾಗೂ ತಂಬಾಕು ಮಾತ್ರ ನಿಷೇಧ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅಡಕೆ ಅಥವಾ ಪಾನ್‌ ಮಸಾಲ ನಿಷೇಧಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಇನ್ನು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಸಹ ಅಡಕೆ ಅಥವಾ ಪಾನ್‌ ಮಲಾಲಾ ನಿಷೇಧ ಇಲ್ಲ ಎಂದಿದ್ದಾರೆ. ಅಡಕೆ ಕುರಿತ ಯಾವುದೇ ತೀರ್ಮಾನ ಮಾಡುವುದಿದ್ದರೂ ಇನ್ನು ಮುಂದೆ ಅಡಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಮನವಿ ಮಾಡಿದ್ದೇನೆ ಎಂದರು.