ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಒಂದು ವರ್ಷದವರೆಗೆ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಒಂದು ವರ್ಷದವರೆಗೆ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಒಂದು ವರ್ಷದವರೆಗೆ ನಿಷೇಧಿಸಿದೆ. ಏಕಾಏಕಿಯಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ತಂಬಾಕು, ನಿಕೋಟಿನ್ ಮೊದಲಾದವನ್ನು ನಿಷೇಧಿಸುವುದರಲ್ಲಿ ತಕರಾರು ಇಲ್ಲ. ಆದರೆ, ಅಡಕೆ ಬೆಳೆಗಾರರಿಗೆ ಅನ್ಯಾಯವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದರು. ನಾನು ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳ ಪರವಾಗಿ ಬೆಂಬಲವಾಗಿ ನಿಲ್ಲುತ್ತಿಲ್ಲ. ಆದರೆ, ಲಕ್ಷಾಂತರ ರೈತರ ಜೀವನೋಪಾಯವಾಗಿರುವ ಅಡಿಕೆ ಬೆಳೆಯ ಹಿತರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ದೇಶದಲ್ಲಿ ಒಟ್ಟು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಅದರಲ್ಲಿ ರಾಜ್ಯದಲ್ಲೇ 5 ಲಕ್ಷ ಹೆಕ್ಟೇರ್ ಹಾಗೂ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 2.5 ಲಕ್ಷ ಹೆಕ್ಟೇರ್ ವಿಸ್ತೀರ್ಣವಿದೆ. ಈಗಾಗಲೇ ಹಲವು ರೋಗಬಾಧೆಗಳಿಂದ ಇಳುವರಿ ಕುಸಿದು ರೈತರು ಕಣ್ಣೀರಿಡುತ್ತಿದ್ದರೆ, ಮತ್ತೊಂದೆಡೆ ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಸರ್ಕಾರದ ಈ ನಿರ್ಧಾರ ಬೆಳೆಗಾರರ ಹೊಟ್ಟೆಗೆ ಹೊಡೆಯುವ ಕೆಲಸವಾಗಿದೆ ಎಂದು ಆರೋಪಿಸಿದರು.
ಹಿಂದೆ ಗುಲಾಂ ನಬಿ ಆಜಾದ್ ಕೇಂದ್ರ ಆರೋಗ್ಯ ಸಚಿವರಾಗಿದ್ದ ಕಾಲದಲ್ಲೂ ಕಾಂಗ್ರೆಸ್ ಸರ್ಕಾರ ಅಡಿಕೆ ವಿರುದ್ಧ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ರಾಜ್ಯ ಸರ್ಕಾರಕ್ಕೆ ಬ್ಲಾಂಕೆಟ್ ಬ್ಯಾನ್ ಮಾಡುವ ಅಧಿಕಾರವಿಲ್ಲದಿದ್ದರೂ, ಸ್ಲೀಪಿಂಗ್ ಬ್ಯಾನ್ ನೆಪದಲ್ಲಿ ಒಂದು ವರ್ಷ ನಿಷೇಧ ಹೇರಿದೆ. ಸಿಗರೆಟ್ ಕಂಪನಿಗಳ ಪ್ರಭಾವಿ ಲಾಬಿಗೆ ಮಣಿದು ಸರ್ಕಾರ ಈ ನಿರ್ಧಾರ ತಳೆದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಿಎಲ್-7 ಬಾರ್ ಲೈಸೆನ್ಸ್ ನೀಡುವ ಮೂಲಕ ಅಡ್ಡದಾರಿಯಲ್ಲಿ ಆದಾಯ ಗಳಿಸುವ ಸರ್ಕಾರ, ಸಿಎಂ ನೀಡಿದ ಒಂದೇ ಒಂದು ಹೇಳಿಕೆಯಿಂದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 4000 ದಿಂದ 5000 ದಷ್ಟು ದಿಢೀರ್ ಕುಸಿತ ಕಾಣುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೊರ ದೇಶದಿಂದ ಕಳ್ಳಮಾರ್ಗದಲ್ಲಿ ಅಡಿಕೆ ಬರುವುದನ್ನು ತಡೆಯುವಂತೆ ಆರಗ ಜ್ಞಾನೇಂದ್ರ ನೇತೃತ್ವದ ತಂಡ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಅಫಿಡವಿಟ್ ನೀಡಿತ್ತು. ಸಿಗರೇಟ್ ಲಾಬಿಗೆ ಈ ಸರ್ಕಾರ ಮಣಿದಿದೆ. ದುರುದ್ದೇಶದಿಂದ ಅಡಿಕೆಗೆ ಹೊಡೆತ ಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಿದೆ. ತಾತ್ಕಾಲಿಕವಾಗಿ ನಿಷೇಧ ಮಾಡಿ ಹೊಡೆತ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಲಾರಿ ಸೀಜ್ ಮಾಡಿ ಬೆಲೆ ಕುಸಿತಕ್ಕೆ ಕಾರಣವಾಗಿತ್ತು ಎಂದು ದೂರಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಅಶೋಕ್ ನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಸಿದ್ದಲಿಂಗಪ್ಪ, ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಸಿಂಗನಹಳ್ಳಿ ಸುರೇಶ್, ಮೋಹನ್ ರೆಡ್ಡಿ, ಎಸ್. ಚಂದ್ರಶೇಖರ್, ಎನ್.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.