ಮೌಲ್ಯಯುತ ಶಿಕ್ಷಣ ಎಲ್ಲರಿಗೂ ಲಭಿಸಲಿ: ಸುನಿಲ್‌ ಕುಮಾರ್‌

KannadaprabhaNewsNetwork |  
Published : Dec 25, 2023, 01:30 AM IST
ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಮೃತ ವೈಭವ ನಡೆಯಿತು. | Kannada Prabha

ಸಾರಾಂಶ

ಭಾನುವಾರ ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೊನಲು ಬೆಳಕಿನ ಸಾಂಸ್ಕೃತಿಕ ಉತ್ಸವ - ಅಮೃತ ವೈಭವ ನಡೆಯಿತು. ವಿದ್ಯಾರ್ಥಿಗಳು ವಿವಿಧ ಕಸರತ್ತು, ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ಭಾಗದ ಮಕ್ಕಳಿಗೆ ದೇಶ ಪ್ರೇಮ ಹಾಗೂ ರಾಷ್ಟ್ರೀಯತೆಯ ಶಿಕ್ಷಣವನ್ನು ನೀಡುವ ಕಾರ್ಯ ಅಮೃತ ಭಾರತಿ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರೀಯತೆ, ಭಾರತೀಯತೆಗೆ ಒತ್ತು ನೀಡಬೇಕಾಗಿದೆ. ಮೌಲ್ಯಯುತ ಶಿಕ್ಷಣ ಎಲ್ಲ ವಿದ್ಯಾರ್ಥಿಗಳು ಲಭಿಸಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.ಅವರು ಭಾನುವಾರ ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೊನಲು ಬೆಳಕಿನ ಸಾಂಸ್ಕೃತಿಕ ಉತ್ಸವ - ಅಮೃತ ವೈಭವವನ್ನು ಉದ್ಘಾಟಿಸಿ ಮಾತನಾಡಿದರು.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಒಂದು ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬಹುದಾಗಿದೆ. ಸ್ವಾತಂತ್ರ್ಯ ಪೂರ್ವಕ್ಕಿಂತ ಇಂದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗಿದ್ದಾರೆ. ಆದರೆ ವಿದ್ಯಾವಂತರಿಂದಲೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಷ್ಟ್ರೀಯತೆಯ ಮೌಲ್ಯಯುತ ಶಿಕ್ಷಣ ಕುಸಿತವಾಗಿದೆ. ಅಮೃತ ಭಾರತಿ ಶಾಲೆಯ ಸಂಸ್ಕಾರಯುತ ಶಿಕ್ಷಣಕ್ಕೆ ನೀಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಮೃತ ಭಾರತಿ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಗುರುದಾಸ ಶೆಣೈ ಪ್ರಸ್ತಾವಿಕ‌ವಾಗಿ ಮಾತನಾಡಿ, 12 ಯಶಸ್ವಿ ಸಮಾನ ಮನಸ್ಕರ ತಂಡದಿಂದ ಆರಂಭಗೊಂಡ ಅಮೃತ ಭಾರತಿ ಟ್ರಸ್ಟ್‌ನಲ್ಲಿ ಇಂದು 2047 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರು.

ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಕ್ಯಾ.ಗಣೇಶ್ ಕಾರ್ಣಿಕ್, ದಕ್ಷಿಣ ಮಧ್ಯ ಕ್ಷೇತ್ರದ ಸಂಶೋಧನಾ ವಿಭಾಗದ ಮುಖ್ಯಸ್ಥ ಜಿ‌.ಆರ್. ಜಗದೀಶ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ಮುಂಬೈ ಉದ್ಯಮಿ ಯದುನಾರಾಯಣ ಶೆಟ್ಟಿ, ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ನಾಯಕ್, ರಾಜರಾಂ ಹೊಳೆಹೊನ್ನೂರು, ದಿನೇಶ್ ಸಾಮಂತ್, ಪಾಂಡುರಂಗ ರಮಣ ನಾಯಕ್‌, ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ ನಾಯಕ್‌, ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್‌ ಕಿಣಿ, ಪ್ರಮುಖರಾದ ರವಿರಾಜ್ ಶೆಟ್ಟಿ, ಉಮೇಶ್, ಪಾಂಡುರಂಗ ಪೈ ಸಿದ್ದಾಪುರ, ಯೂನಿಯನ್ ಬ್ಯಾಂಕ್ ಡಿಜಿಎಂ ಡಾ.ಎಚ್.ಟಿ. ವಾಸಪ್ಪ, ಡಾ.ದಿನೇಶ್, ಹೆಬ್ರಿಯ ಠಾಣಾಧಿಕಾರಿ ಮಹಂತೇಶ್, ಅಮೃತಭಾರತಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಹೆಬ್ರಿಯ ಬಾಲಕೃಷ್ಣ ಮಲ್ಯ, ಭಾಸ್ಕರ ಜೋಯಿಸ್‌, ಸುಧೀರ್‌ ನಾಯಕ್‌, ದಿನೇಶ ಪೈ, ಸತೀಶ್‌ ಪೈ, ಯೋಗೀಶ್‌ ಭಟ್‌, ಗಣೇಶ್‌ ಕಿಣಿ, ವಿಷ್ಣುಮೂರ್ತಿ ನಾಯಕ್‌ ಸಹಿತ ಗಣ್ಯರು ಪಾಲ್ಗೊಂಡರು.ದೈಹಿಕ ಶಿಕ್ಷಣ ಶಿಕ್ಷಕ ನಿರ್ದೇಶಕ ವಿಜಯಕುಮಾರ್ ಶೆಟ್ಟಿ ನಿರೂಪಿಸಿದರು.

* ಆಕರ್ಷಕ ಪಥಸಂಚಲನಅಮೃತ ಭಾರತಿ ಕಾಲೇಜಿನ ಸಾವಿರಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ದೇಶಿಯ ಸಂಸ್ಕೃತಿಯನ್ನು ಸಾರುವ ಸಂಚಲನ, ಘೋಷ್‌, ಶಿಶು ನೃತ್ಯ, ಸಾಮೂಹಿಕ ವ್ಯಾಯಾಮ, ಏಕಚಕ್ರ, ದ್ವಿಚಕ್ರ ಸಮತೋಲನ, ಪಿರಮಿಡ್‌, ಕುಣಿತ ಭಜನೆ, ಮಲ್ಲಕಂಬ, ರಚನೆ, ಜಡೆ ಕೋಲಾಟ, ಬೆಂಕಿ ಸಾಹಸ, ಜನಪದ ನೃತ್ಯ ವೈವಿಧ್ಯ, ಯೋಗಾಸನ, ನೃತ್ಯ ರೂಪಕ ಸಹಿತ ವಿವಿಧ ಕಾರ್ಯಕ್ರಮಗಳು ಅಮೃತ ವೈಭವದಲ್ಲಿ ಪ್ರದರ್ಶನಗೊಂಡಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ