ಮಖಾಡೆ ಮಲಗಿದ ಗಜ, ತತ್ತರಿಸಿದ ನೇಕಾರಿಕೆ

KannadaprabhaNewsNetwork |  
Published : Jan 24, 2024, 02:02 AM IST
ಮಖಾಡೆ ಮಲಗಿದ ಗಜ, ತತ್ತರಿಸುತ್ತರುವ ನೇಕಾರಿಕೆ! | Kannada Prabha

ಸಾರಾಂಶ

ಗಜ ಬಾರ್ಡರ್‌ ಸೀರೆಗಳ ಬೇಡಿಕೆ ಕುಸಿತದಿಂದಾಗಿ ನೇಕಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೆ, ಸೀರೆಗಳು ಗೋದಾಮು ಸೇರಿ ಧೂಳು ಹಿಡಿಯುತ್ತಿವೆ

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ.

ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಖ್ಯಾತಿಗೆ ಭಾಜನವಾಗಿರುವ ರಬಕವಿ-ಬನಹಟ್ಟಿ ಜವಳಿ ಉದ್ದಿಮೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದರೆ, ಈಗ ಗಜ ಬಾರ್ಡರ್‌ ಸೀರೆಗಳ ಬೇಡಿಕೆ ಕುಸಿದಿದೆ. ಹೀಗಾಗಿ ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒಂದೂವರೆ ವರ್ಷಗಳಿಂದ ಡಿಮಾಂಡ್‌ ಕ್ರಿಯೆಟ್‌ ಮಾಡಿದ್ದ ಗಜ ಬಾರ್ಡರ್ ಸೀರೆಗಳು ಉತ್ತಮ ದರ ತಂದುಕೊಟ್ಟಿದ್ದರಿಂದ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ ಮತ್ತಿತರ ರಾಜ್ಯಗಳ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದಿತ್ತು. ಅತ್ಯಾಧುನಿಕ ನಕ್ಷೆ, ಅನುಭವಿ ನೇಕಾರರ ಕೌಶಲ್ಯಯುತ ನೇಯ್ಗೆಯಿಂದ ಈ ಸೀರೆಗಳು ಗ್ರಾಹಕರನ್ನು ಆಕರ್ಷಿಸಿದ್ದವು. ರಬಕವಿ-ಬನಹಟ್ಟಿಯಿಂದ ದಿನಕ್ಕೆ ಕನಿಷ್ಠ ೧೦ ಸಾವಿರ ಸೀರೆಗಳು ಉತ್ಪಾದನೆಗೊಳ್ಳುತ್ತಿದ್ದವು. ಆರಂಭದಲ್ಲಿ ಒಂದು ಸೀರೆ ₹1000ಕ್ಕೂ ಅಧಿಕ ದರಕ್ಕೆ ಮಾರಾಟವಾಗುತ್ತಿತ್ತು. ಆದರೆ, ಈಗ ದಿಢೀರ್ ಬೇಡಿಕೆ ಕುಸಿದಿದ್ದರಿಂದ ಒಂದು ಸೀರೆ ದರ ₹೪೦೦ಕ್ಕೂ ಕೆಳಗೆ ಕುಸಿದಿದೆ. ಸೀರೆಗಳು ಬೇಡಿಕೆ ಇಲ್ಲದೆ ಗೋದಾಮು ಸೇರಿ ಧೂಳು ಹಿಡಿಯುತ್ತಿವೆ. ಲಕ್ಷಾಂತರ ಬಂಡವಾಳ ಹೂಡಿಕೆ ಮಾಡಿದ್ದ ನೇಕಾರರು ತತ್ತರಿಸಿ ಹೋಗಿದ್ದಾರೆ.

ನೇಕಾರರ ಮಜೂರಿಗೂ ಬಿತ್ತು ಕತ್ತರಿ:

ದಿನಕ್ಕೆ ಒಂದೇ ಸೀರೆ ನೇಯ್ಗೆ ಮಾಡಿದರೂ ₹ ೧೨೫ ದಿಂದ ೧೫೦ ಮಜೂರಿ ಪಡೆಯುತ್ತಿದ್ದ ನೇಕಾರರು ಗಜ ಬೇಡಿಕೆ ಕಡಿಮೆ ಆಗಿದ್ದರಿಂದ ಪರಂಪರಾಗತ ಕಾಟನ್ ಸೀರೆಯತ್ತ ವಾಲಿದ್ದು, ಒಂದು ಸೀರೆಗೆ ಮಜೂರಿ ₹ ೮೫ -೯೫ ಇಳಿಕೆಯಾಗಿ ನೇಕಾರರ ಮಜೂರಿಗೂ ಕತ್ತರಿ ಬಿದ್ದಿದೆ.

ಉತ್ಪಾದನೆಯೂ ಕುಂಠಿತ;

ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದರಿಂದ ತಾಲೂಕಿನ ನೇಕಾರರು ಶೇ.೫೦ಕ್ಕೂ ಅಧಿಕ ಗಜ ಬಾರ್ಡರ್ ಸೀರೆಯನ್ನೇ ಉತ್ಪಾದನೆ ಮಾಡುತ್ತಿದ್ದರು. ಅವಳಿ ನಗರದಲ್ಲೇ ದಿನಕ್ಕೆ 10 ಸಾವಿರಷ್ಟು ಉತ್ಪಾದನೆ ಆಗುತ್ತಿದ್ದ ಗಜ ಬಾರ್ಡರ್‌ ಸೀರೆಗಳು ಬೇಡಿಕೆ ಕುಸಿತದಿಂದ ಸಂಪೂರ್ಣ ಉತ್ಪಾದನೆ ಬಂದ್ ಆಗಿದ್ದು, ನೇಕಾರರು ಮತ್ತೆ ಕಾಟನ್ ಸೀರೆಯತ್ತ ಮುಖ ಮಾಡಿದ್ದಾರೆ.

ಗಜ ಪತನಕ್ಕೆ ಕಾರಣಗಳೇನು?

ಮಾರುಕಟ್ಟೆಯಲ್ಲಿ ದಾಖಲೆಯ ಬೇಡಿಕೆ ಹೊಂದಿದ್ದ ಗಜ ಬಿಗ್ ಬಾರ್ಡರ್ ಸೀರೆಗಳು ದಿನಕಳೆದಂತೆ ಸೀಮಿತ ಮಾರುಕಟ್ಟೆ ಆಶ್ರಯಿಸಕೊಳ್ಳುವಂತಾಯಿತು. ಸಮರ್ಪಕ ಮಾರುಕಟ್ಟೆ ಕೊರತೆ ಮತ್ತು ಲಾಭದ ದೃಷ್ಟಿಯಿಂದ ಎಲ್ಲ ನೇಕಾರರು ಗಜ ಬಾರ್ಡರ್ ಸೀರೆಗಳನ್ನೇ ಉತ್ಪಾದನೆ ಮಾಡಲಾರಂಭಿಸಿದ ಕಾರಣ ಒಂದೇ ಮಾದರಿಯ ವಿನ್ಯಾಸದ ಸೀರೆಗಳು ದಾಖಲೆ ಪ್ರಮಾಣದಲ್ಲಿ ಉತ್ಪಾದನೆಯಾಗಿ ಮಾರುಕಟ್ಟೆಗೆ ಬಂದಿದ್ದರಿಂದ ವರ್ತಕರು ಬೆಲೆಯಲ್ಲಿ ಚೌಕಾಸಿ ಆರಂಭಿಸಿದ್ದರಿಂದ ದರ ಕುಸಿತಕ್ಕೆ ಕಾರಣವಾಯ್ತು ಎಂದು ಜವಳಿ ವರ್ತಕ ವಿನೋದ ಸಿಂದಗಿ ಅಭಿಪ್ರಾಯಪಟ್ಟಿದ್ದಾರೆ.

--------

ಗಜ(ಆನೆ) ಬಾರ್ಡರ್ ಸೀರೆಗಳ ಮಾರಾಟದಲ್ಲಿ ಲಾಭ ಗಳಿಸುವ ಆಸೆಯಿಂದ ಮಜೂರಿ ನೇಕಾರರೂ ಸ್ವಂತ ಬಂಡವಾಳ ಹೂಡಿ ಸೀರೆ ಉತ್ಪಾದನೆಯಲ್ಲಿ ತೊಡಗಿದಾಗ ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಸೀರೆಗಳು ಬರಲಾರಂಭಿಸಿದವು. ಇದರಿಂದಾಗಿ ನಮ್ಮ ಜವಳಿ ಮಾರುಕಟ್ಟೆ ನೆಲಕಚ್ಚಿತು. ಅಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಈ ವರ್ಷ ಮಳೆ ಕೈಕೊಟ್ಟಿದ್ದು ಮತ್ತು ನಮ್ಮಲ್ಲಿನ ಅನಾರೋಗ್ಯಕರ ಪೈಪೋಟಿಯಿಂದ ಮಾರುಕಟ್ಟೆಯಲ್ಲಿ ಸೀರೆಗಳ ಬೆಲೆ ಇಳಿಕೆಯಾಗಲು ಕಾರಣವಾಯಿತು. ಇದು ನೇಕಾರರ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ.

- ಮಹಾದೇವ ಕೋಟ್ಯಾಳ, ಜವಳಿ ಉದ್ಯಮಿ ರಬಕವಿ

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ