ಕನ್ನಡಪ್ರಭ ವಾರ್ತೆ ಹಿರೇಕೆರೂರು
ನಿಗದಿಯಾದ ಮಾನವ ದಿನಗಳನ್ನು ಸರಿಯಾಗಿ ದಾಖಲಿಸಿ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ಪಾವತಿಸಬೇಕು. ಒಂದು ಕಾಮಗಾರಿ ಮುಗಿಯುತ್ತಿದ್ದಂತೆ ಬೇರೆ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಚನ್ನಳ್ಳಿ ಹೊರವಲಯದ ಕೆರೆಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಪ್ರಸ್ತುತ ಬರ ಎದುರಿಸಲು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕೂಲಿ ಕಾರ್ಮಿಕರಿಗೆ ಸಮರ್ಪಕ ಉದ್ಯೋಗ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಎಂಥ ಸಂದರ್ಭದಲ್ಲೂ ಸರ್ಕಾರ ನಿಮ್ಮ ಜತೆಗಿರಲಿದ್ದು, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ತಡೆಯಲು ಸರ್ಕಾರ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿದೆ. ರೈತರು ಕೂಡ ತಮ್ಮ ಹೊಲಗಳಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಕೆಲಸದ ಸ್ಥಳದಲ್ಲಿ ನೀರು, ಆರೋಗ್ಯ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಲಾಲನೆಗೆ ಹಿರಿಯ ಮಹಿಳಾ ಕಾರ್ಮಿಕರನ್ನು ನೇಮಿಸುವ ಮೂಲಕ ಮಕ್ಕಳ ಸಂರಕ್ಷಣೆಗೆ ಒತ್ತು ಕೊಡಬೇಕು. ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಹಾಗೂ ಈಗಾಗಲೇ ಮಾನವ ದಿನಗಳು ಮುಗಿದ ಕಾರ್ಮಿಕರಿಗೆ ಹೆಚ್ಚಿನ ಮಾನವ ದಿನಗಳನ್ನು ನೀಡಬೇಕು ಎಂಬ ಬೇಡಿಕೆಗೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂಬ ಭರವಸೆ ನೀಡಿದರು.
ಕೆಲಸದ ಸಮಯದಲ್ಲಿ ಹಿರಿಯ ನಾಗರಿಕರಿಗೆ ಸಡಿಲಿಕೆ ನೀಡಿ ಹಾಗೂ ಅಂತಹ ಕೂಲಿ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾರ್ಜುನ ಎಂ., ಎಂಜಿನಿಯರ್ ಎ.ಎನ್. ಕಿಲ್ಲೇದಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಭೀಮಾನಾಯ್ಕ ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.