ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಸಾರ್ವಜನಿಕ ಉದ್ಯಾನವನದಲ್ಲಿ ಸೇರಿದ ನೌಕರರು, ಸಮಿತಿ ಪದಾಧಿಕಾರಿಗಳು, ಸದಸ್ಯರು ಮುಖ್ಯ ರಸ್ತೆ ಮುಖಾಂತರ ಡಿಸಿ ಕಚೇರಿವರೆಗೆ ರ್‍ಯಾಲಿಯನ್ನು ಕೈಗೊಂಡು ನಂತರ ಸಂಸದರ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಮನವಿ ಸಲ್ಲಿಸಿದರು.
ಕಳೆದ 9 ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಜನರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿವೆ ಎಂದು ಆರೋಪಿಸಿದರು.ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಿ ನೌಕರರೆಂದು ಪರಿಗಣಿಸಬೇಕು. 3-6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್ಇಪಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಮತ್ತು ಇವರನ್ನು ಕಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು. ಅದೇ ರೀತಿ 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುವ ಬಿಸಿಯುಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗೆ 31 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯಗಳನ್ನು ಮಾಸಿಕ ಕನಿಷ್ಠ 10ಸಾವಿರ ರು. ಪಿಂಚಣಿ ಕೊಡಬೇಕು ಎಂಬುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ರ್‍ಯಾಲಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಜಿಲ್ಲಾ ಖಜಾಂಚಿ ಶಬ್ಬೀರ್, ಪದಾಧಿಕಾರಿಗಳಾದ ರಂಗಮ್ಮ ಅನ್ವಾರ, ವರಲಕ್ಷ್ಮಿ, ರೇಣುಕಮ್ಮ, ಮರಿಯಮ್ಮ, ಮಹಮ್ಮದ್ ಹನೀಫ್, ಗಿರಿಯಪ್ಪ ಪೂಜಾರಿ, ಶರ್ಫುದ್ದೀನ್, ಅನ್ವರ ಪಾಷಾ, ರಮಾದೇವಿ, ನರ್ಮದಾ, ಸರಸ್ವತಿ, ಅಕ್ಕಮಹಾದೇವಿ, ಶ್ರೀಲೇಖ ಸೇರಿ ಹಲವರು ಇದ್ದರು.