ಹಾನಗಲ್ಲ: ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಇಂಡಿಯಾ ಈಸ್ ಡೆವಲಪಿಂಗ್ ಕಂಟ್ರಿ ಎಂದು ಹೇಳುತ್ತಾ ಬರುತ್ತಿದ್ದೇವೆ. ಇಂಡಿಯಾ ಈಸ್ ಡೆವಲಪಡ್ ಕಂಟ್ರಿಯನ್ನಾಗಿ ಮಾಡುವುದು ವಿದ್ಯಾರ್ಥಿಗಳು ಹಾಗೂ ಯುವ ಸಮೂಹದ ಕೈಯಲ್ಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅಡಿ ಪ್ರಥಮ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಮತ್ತೆಂದೂ ಮರಳಿ ಬಾರದು. ಹಾಗಾಗಿ ಪ್ರತಿ ನಿಮಿಷವೂ ಅನುಭವಿಸಿ. ಶಿಕ್ಷಣದ ಪ್ರತಿ ವಿಭಾಗಗಳಲ್ಲಿಯೂ ಸಹ ಆಸಕ್ತಿ ವಹಿಸಿ. ಕಾನ್ಸ್ಂಟ್ರೇಶನ್ ಮತ್ತು ಕಮಿಟ್‌ಮೆಂಟ್ ಇದ್ದರೆ ಸಕ್ಸಸ್ ಖಂಡಿತವಾಗಿಯೂ ಬೆನ್ನು ಹತ್ತಲಿದೆ. ಇಂಪಾಸಿಬಲ್ ಎನ್ನುವುದು ಡಿಕ್ಷನರಿಯಲ್ಲಿಯೇ ಇಲ್ಲ. ಹಾಗಾಗಿ ಗೋಲ್ ಸೆಟ್ ಮಾಡಿಕೊಂಡು ಜೀಲ್‌ನೊಂದಿಗೆ ಬೆನ್ನು ಹತ್ತಿ ಎಂದು ಕಿವಿಮಾತು ಹೇಳಿದರು. ನಮ್ಮ ಭಾರತದಂಥ ಶ್ರೇಷ್ಠ ದೇಶ ಜಗತ್ತಿನ ಬೇರೆಲ್ಲೂ ಇಲ್ಲ. ಇಲ್ಲಿ ಜನ್ಮತಳೆದ ನಾವೆಲ್ಲರೂ ಸೌಭಾಗ್ಯವಂತರು. ಹಿರಿಯರ ಶ್ರಮದಿಂದ ಭಾರತ ಇಡೀ ದೇಶಕ್ಕೆ ಅನ್ನ ನೀಡುವಂಥ ಶಕ್ತಿಯುತ ದೇಶ. ಸಾಮರಸ್ಯ, ಸದ್ಭಾವನೆಯಿಂದ ಬದುಕುವ ಸಂಕಲ್ಪ ವಿದ್ಯಾರ್ಥಿಗಳು ತೊಡಬೇಕಿದೆ. ಶಿಕ್ಷಣ ಪೂರೈಸಿ ಹೊರ ಬಿದ್ದಾಗ ತಲೆಯಲ್ಲಿ ಇಲ್ಲದ ವಿಷಯ ಬಿತ್ತಿ, ಜಾತಿ, ಧರ್ಮಗಳನ್ನು ಎತ್ತಿ ಕಟ್ಟುವ ಬಹುದೊಡ್ಡ ಷಡ್ಯಂತ್ರ ಹೂಡುವರ ಬಗ್ಗೆ ಎಚ್ಚರ ಇರಲಿ. ಮಾನವೀಯ ಮೌಲ್ಯಗಳೊಂದಿಗೆ ಸಾಮಾಜಿಕ ಆಗು, ಹೋಗುಗಳಿಗೆ ಸ್ಪಂದಿಸುವ ಭಾವನೆ ನಿಮ್ಮಲ್ಲಿ ಮೂಡಬೇಕಿದೆ ಎಂದರು. ಪ್ರಾಚಾರ್ಯ ಡಾ.ವೀರೇಶ ಕುಮ್ಮೂರ, ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಮೆಹಬೂಬ ಬ್ಯಾಡಗಿ, ಅಲ್ತಾಫ್ ಶಿರಹಟ್ಟಿ, ಗುತ್ತೆಪ್ಪ ಸೈದಣ್ಣನವರ, ಉಡುಚಪ್ಪ ಕರಬಣ್ಣನವರ, ಯಾಸೀರ್‌ಅರಾಫತ್ ಮಕಾನದಾರ, ಉಪನ್ಯಾಸಕಿ ಯಮುನಾ ಕೋಣೆಸರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಯಶಸ್ವಿಯಾದರೆ, ಗುರಿ ತಲುಪಿದರೆ ಖಂಡಿತವಾಗಿ ಭಾರತವೂ ಯಶಸ್ವಿಯಾಗಲಿದೆ. ಮತ್ತೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಜೀವನ ಸಿಗುವುದಿಲ್ಲ. ಹಾಗಾಗಿ ಸಮಯ ಸದ್ಬಳಕೆ ಮಾಡಿಕೊಂಡು, ಗುರಿ ಮುಟ್ಟುವ ಶಪಥ ಗೈಯ್ಯಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.