ಜೋಗವನ್ನು ಮಾದರಿ ಪ್ರವಾಸೋದ್ಯಮ ಸ್ಥಳವಾಗಿಸುವೆ

KannadaprabhaNewsNetwork | Published : May 13, 2025 1:31 AM
Follow Us

ಸಾರಾಂಶ

ತಾಳಗುಪ್ಪ: ನೈಸರ್ಗಿಕ ಸಂಪತ್ತಿನಿಂದ ಕೂಡಿದ ಜೋಗ ಜಲಪಾತ ಪ್ರದೇಶವನ್ನು‌ ಐಕಾನಿಕ್ ಹಾಗೂ ಮಾದರಿ ಪ್ರವಾಸೋದ್ಯಮ ಪ್ರದೇಶವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಳಗುಪ್ಪ: ನೈಸರ್ಗಿಕ ಸಂಪತ್ತಿನಿಂದ ಕೂಡಿದ ಜೋಗ ಜಲಪಾತ ಪ್ರದೇಶವನ್ನು‌ ಐಕಾನಿಕ್ ಹಾಗೂ ಮಾದರಿ ಪ್ರವಾಸೋದ್ಯಮ ಪ್ರದೇಶವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಜೋಗ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜೋಗ ಜಲಪಾತ ಪ್ರದೇಶದ ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

184 ಕೋಟಿ‌ ರು. ಮೊತ್ತದಲ್ಲಿ‌ ಅಭಿವೃದ್ಧಿಪಡಿಸಲಾಗುತ್ತಿರುವ ಕಾಮಗಾರಿಗಳಾದ ಎಂಟ್ರೆನ್ಸ್ ಪ್ಲಾಜಾ, ಟೇಬಲ್ ಟಾಪ್ ಏರಿಯಾ ವ್ಯು, ವ್ಯುಡೆಕ್, ಸೆಂಟ್ರಲ್ ಏರಿಯಾ, ಟ್ರಾನ್ಸಿಟ್ ಹಬ್, ಎಸ್‌ಟಿಪಿ ರಸ್ತೆ, ಚರಂಡಿ, ರಿಟೇಲ್ ನೋಡ್ ಬ್ಲಾಕ್ಸ್, ಬ್ಲಾಕ್ ಎ, ಬಿ, ಸಿ , ಆರ್ಟ್ ಗ್ಯಾಲರಿ, ಸಿಸಿಟಿವಿ ಇತರೆ ವೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಅಕ್ಟೋಬರ್ 2021ರಲ್ಲಿ‌ ಕೆಲಸ ಆರಂಭಿಸಲಾಗಿದೆ.‌ ಸ್ವಾಭಾವಿಕ‌ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಈ ಪ್ರದೇಶ ಐಕಾನಿಕ್ ಸ್ಥಳವಾಗುವಂತೆ, ಇತರೆ ದೇಶಗಳೂ ಇದನ್ನು ಮಾದರಿಯಾಗುವಂತೆ ತೆಗೆದುಕೊಳ್ಳುವಂತೆ ಕಾಮಗಾರಿಗಳು ಆಗಬೇಕು ಎಂದು‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವ್ಯುಡೆಕ್‌ ನಲ್ಲಿ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳಬೇಕು. ಜನರಿಗೆ ಉತ್ತಮ‌ ಮನೋರಂಜನೆ ಜೊತೆ ಆದಾಯ ತರುವಂತಹ ಚಟುವಟಿಕೆಗೆ ಒತ್ತು ನೀಡಬೇಕು. ಜಯಿಂಟ್ ವ್ಹೀಲ್ ಅಳವಡಿಸುವ ಮೂಲಕ ಅದರಿಂದ ಜೋಗ ಜಲಪಾತದ ಸೊಬಗನ್ನು ಸವಿಯುವ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ವರ್ಷದ ೩೬೫ ದಿನಗಳೂ ಪ್ರವೇಶಕ್ಕೆ ಲಭ್ಯವಾಗುವಂತೆ ಮಾಡಬೇಕು. ಜಲಪಾತಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದರೆ ಇನ್ನೂ ಆಕರ್ಷಕವಾಗಿರುತ್ತದೆ. ಬೇಸಿಗೆಯಲ್ಲಿ ಮಕ್ಕಳ ಮನೋರಂಜನೆಗೆ ರೈನ್ ಡ್ಯಾನ್ಸ್, ಇತರೆ ಚಟುವಟಿಕೆ ಹಾಕಿಕೊಳ್ಳಬೇಕು. ಶೈಕ್ಷಣಿಕ ಪ್ರವಾಸಕ್ಕೆ ವ್ಯವಸ್ಥೆ ಮಾಡಬೇಕು. ಕೆಆರ್‌ಎಸ್ ರೀತಿ ಗಾರ್ಡನ್, ಫೌಂಟನ್ ವ್ಯವಸ್ಥೆ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಿತ್ತದೆ ಎಂದರು.

ಸಭೆಗೂ ಮುನ್ನ ಸಚಿವರು, ಶಾಸಕರು‌ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು‌ ವೀಕ್ಷಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ, ಕಾರ್ಗಲ್ ಪ.ಪಂ.ಅಧ್ಯಕ್ಷ ರಾಜು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೆಪಿಸಿ ಮುಖ್ಯ ಅಧೀಕ್ಷಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

6 ರಿಂದ 8 ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿ

ಮುಗಿಯುವ ನಿರೀಕ್ಷೆ: ಸಚಿವ

ಜೋಗ ಜಲಪಾತದ ಅಭಿವೃದ್ಧಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು 75 ಕೋಟಿ ರು. ಅನುದಾನ ತಂದು ಕೆಲಸ ಚುರುಕುಗೊಳಿಸಿದ್ದಾರೆ. ರೋಪ್ ವೇ, ಗ್ಲಾಸ್ ಹೌಸ್, ಝಿಪ್ ಲೈನ್, ಕೆಆರ್ ಎಸ್ ರೀತಿ ಪಾರ್ಕ್, ಮನೋರಂಜನೆ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆ ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಿಂಟ್ ವೀಲ್, ಕೇಬಲ್ ಕಾರ್, ನೈಟ್ ವ್ಯೂ ವ್ಯವಸ್ಥೆ ಮಾಡಲು ಸಲಹೆ ನೀಡಿದ್ದೇನೆ.‌ ಜೋಗ ಅತ್ಯಂತ ಆಕರ್ಷಣೀಯ ಪ್ರವಾಸೋದ್ಯಮ ಪ್ರದೇಶ ಆಗಬೇಕು. ರಾಜ್ಯದಲ್ಲೇ ಅತಿ ಹೆಚ್ಚು ಮತ್ತು ೪ ಮಟ್ಟದ ವಿದ್ಯುತ್ ಉತ್ಪಾದನೆ ಆಗುತ್ತಿರುವ ವ್ಯವಸ್ಥೆ ಕುರಿತು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಮ್ಯೂಸಿಯಂ ಲ್ಲಿ ಲೈವ್ ಟಿವಿ ಹಾಕಿ ತೋರಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಆಗಬೇಕಿದ್ದು, 6 ರಿಂದ 8 ತಿಂಗಳಲ್ಲಿ ಕೆಲಸ ಮುಗಿಯುವ ನಿರೀಕ್ಷೆ ಇದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯದ, ಹೊರ ರಾಜ್ಯದ ಜನರು ಬರುವ ಹಾಗೆ ಜೋಗ ಜಲಪಾತ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ. 184 ಕೋಟಿ ರು. ವೆಚ್ಚದ ಕಾಮಗಾರಿ ಇದಾಗಿದ್ದು ಈವರೆಗೆ 95 ಕೋಟಿ ಬಿಡುಗಡೆ ಮಾಡಲಾಗಿದೆ. ರೈನ್ ಡಾನ್ಸ್, ಫೌಂಟನ್ , ಗ್ಲಾಸ್ ಹೌಸ್ , ರೋಪ್ ವೇ, ಜಯಿಂಟ್ ವೀಲ್ ಇತರೆ ಮನೋರಂಜನೆ, ಪಾರ್ಕಿಂಗ್, ಪೀಕ್ ಸೀಜನ್ ಲ್ಲಿ ಜನದಟ್ಟಣೆ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಡ್ಯಾಂ ಕೆಳಗೆ ಜಾಗ ಇದ್ದು ಕೆಆರ್ ಎಸ್ ರೀತಿ ದೊಡ್ಡ ಪಾರ್ಕ್ ನ್ನು ಪ್ರಾಧಿಕಾರದಿಂದ ಮಾಡುವ ಯೋಜನೆ ಇದೆ. ಪಾರ್ಕಿಂಗ್, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.