ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿ ವೈದ್ಯಕೀಯ ಸೇವಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆ ವೈದ್ಯರು ಹಾಗೂ ಇತರ ಸಿಬ್ಬಂದಿ ಸಭೆ ನಡೆಸಿ ಮಾತನಾಡಿ, ಸಮಾಜದಲ್ಲಿ ಸುಲಿಗೆ ಮಾಡಲು ನಾವು ವೈದ್ಯಕೀಯ ಶಿಕ್ಷಣ ಪಡೆಯಬೇಕಾ?. ಹಣ ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸದೆ ವಂಚಿಸುವುದೂ ಕೂಡ ಭ್ರಷ್ಟಚಾರ ಎಂದು ಎಚ್ಚರಿಸಿದರು.
ನಾವು ನೀಡುವ ಸೇವೆಗಾಗಿ ಜನ ವೈದ್ಯರನ್ನು ದೇವರ ಸ್ಥಾನಕ್ಕೆ ಇಟ್ಟಿದ್ದಾರೆ. ವೈದ್ಯರು ಜನರ ಕಷ್ಠ ನಿವಾರಿಸುವ ದೇವರಾಗಬೇಕು. ನಮ್ಮ ಒಂದು ಚಿಕ್ಕ ಸೇವೆ ಸಾವಿರಾರು ಕುಟುಂಬಗಳ ಬಾಳಿನಲ್ಲಿ ದೀಪ ಬೆಳಗುತ್ತದೆ. ವೈದ್ಯರು ಸಮಾಜವನ್ನು ಬೆಳಗುವ ದೀಪಗಳಾಗಬೇಕು ಎಂದರು.ರಾಜ್ಯ ಆರೋಗ್ಯ ವಿಚಕ್ಷಣಾ ದಳ ಲೋಕಾಯುಕ್ತದಂತೆ ಕೆಲಸ ಮಾಡುತ್ತಿದೆ. ವೈದ್ಯಕೀಯ ಸೇವೆಯಲ್ಲಿನ ತಪ್ಪು ಹುಡುಕುವುದು ನಮ್ಮ ಮುಖ್ಯ ಗುರಿಯಲ್ಲ. ಬದಲಾಗಿ ವೈದ್ಯರ ಸೇವೆ ಹಾಗೂ ವೈದ್ಯಕೀಯ ಸವಲತ್ತುಗಳು ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಖ್ಯ ಗುರಿ ಎಂದರು.
ನಾನು ಕೂಡ ರೈತನ ಮಗ. ಆಸ್ಪತ್ರೆಗಳ ಸುಧಾರಣೆ ಮತ್ತು ಆಸ್ಪತ್ರೆಗೆ ಬರುವ ಬಡ ರೈತರ ಬಗ್ಗೆ ನಾನು ಸದಾ ಯೋಚಿಸುತ್ತೇನೆ. ನಾನು ಮೊದಲು ದೇಶದ ಒಬ್ಬ ನಾಗರೀಕ. ಆ ನಂತರ ಸರ್ಕಾರಿ ಅಧಿಕಾರಿ. ಬಡ ರೈತರು ಖಾಸಗಿ ಚಿಕಿತ್ಸೆಗೆ ಹೋದರೆ ತಮ್ಮ ಮನೆ ಮಠ ಮಾರಿಕೊಳ್ಳಬೇಕಾಗಿದೆ. ಶೇ.05 ರಷ್ಟು ಕರ್ತವ್ಯ ಲೋಪ ವೈದ್ಯಕೀಯ ಸಿಬ್ಬಂದಿಯಿಂದ ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ರೋಗಿಗಳ ಮುಂದೆ ಕೈಚಾಚಿದರೆ ನಮ್ಮ ಮಾನವನ್ನು ನಾವು ಮಾರಿಕೊಂಡಂತೆ. ಪ್ರೀತಿ ಮತ್ತು ದಯೆ ನಮ್ಮ ರಕ್ತದಲ್ಲಿರಬೇಕು. ಆಸ್ಪತ್ರೆಗೆ ಬರುವ ರೋಗಿಯ ಜೊತೆ ಸೌಜನ್ಯದಿಂದ ವರ್ತಿಸಬೇಕು. ನಗು ಆರೋಗ್ಯದ ಲಕ್ಷಣ. ವೈದ್ಯರು ಸದಾ ನಗುಮುಖದಿಂದ ಸೇವೆ ಸಲ್ಲಿಸಲು ದೇವರು ನಮಗೆ ಕೊಟ್ಟಿರುವ ಅವಕಾಶ. ಇದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ರಾಜ್ಯ ಸರ್ಕಾರವೂ ವಾರ್ಷಿಕ 30-40 ಲಕ್ಷ ಹಣವನ್ನು ಆಸ್ಪತ್ರೆಯ ಸೇವಾ ವ್ಯವಸ್ಥೆಗೆ ನೀಡುತ್ತಿದೆ. ಇಲ್ಲಿನ ಆದಾಯದ ಹಣ ಬಳಕೆ ಮಾಡಿ ಪಾರದರ್ಶಕ ಟೆಂಡರ್ ಮೂಲಕ ನೇರವಾಗಿ ಔಷಧಿ ಕಂಪನಿಗಳ ಮೂಲಕವೇ ಅಗತ್ಯ ಔಷಧಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ರೋಗಿಗಳಿಗೆ ನೀಡಬಹುದು ಎಂದರು.
ಸಭೆಯಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಸೋಮಶೇಖರ್, ತಾಲೂಕು ಆರೋಗ್ಯಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.