ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿಯೊಬ್ಬ ರೋಗಿಯನ್ನು ಸಮಾನ ಮನೋಭಾವದಿಂದ ನೋಡಿ. ಹಣ ಗಳಿಕೆಯೇ ವೈದ್ಯ ವೃತ್ತಿಯ ಮುಖ್ಯ ಧ್ಯೇಯವಲ್ಲ ಎಂದು ನವಿ ಮುಂಬೈನ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ನ ವಿಶ್ರಾಂತ ಸಂಶೋಧನಾ ನಿರ್ದೇಶಕಿ ಡಾ.ಸಬಿತಾ ಎಂ.ರಾಮ್ ಹೇಳಿದರು.ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಭವನದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ಇಂದು ನೀವು ಪದವೀಧರರಾಗುತ್ತಿದ್ದಿರಿ. ನಿಮ್ಮ ಬದುಕಿನಲ್ಲಿ ಇಂದಿನಿಂದ ಹೊಸ ಅಧ್ಯಾಯ ಆರಂಭವಾಗಿದೆ. ವೃತ್ತಿಯಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿ ಎಂದು ಸಲಹೆ ನೀಡಿದರು.
ನಗರದಲ್ಲಿ ಡಾ.ವೀರಣ್ಣ ಚರಂತಿಮಠ ಅವರು ಅತ್ಯುತ್ತಮ ದಂತ ಕಾಲೇಜನ್ನು ಸ್ಥಾಪಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಳ್ಳಲು ಅಗತ್ಯದ ನೆರವು ನೀಡಿದ್ದಾರೆ. ನೀವು ವಿದ್ಯೆ ಪಡೆದ ಸಂಸ್ಥೆಯನ್ನು ಮರೆಯಬೇಡಿ. ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಸಂಸ್ಥೆಗೆ ಗೌರವ ತಂದುಕೊಡಿ ಎಂದು ನುಡಿದರು.ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಮಾತನಾಡಿ, ನೀವು ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸಿ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು. ದಂತ ವೈದ್ಯಕೀಯ ಸಮುದಾಯ ಮತ್ತು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರು ದಂತವೈದ್ಯಕೀಯ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಇತ್ತೀಚೆಗೆ ಸುಮಾರು ಮೂರು ಕೋಟಿ ರು. ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ಖರೀದಿಸಲಾಗಿದೆ. ದಂತ ಆಸ್ಪತ್ರೆಯ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ದಂತ ಕಾಲೇಜನ್ನು ಶ್ರೇಷ್ಠ ಸಂಸ್ಥೆಯಾಗಿ ರೂಪಿಸುವ ಯೋಜನೆ ಹೊಂದಲಾಗಿದೆ ಎಂದರು.
ಪದವಿ ಪ್ರಧಾನ ಸಮಾರಂಭದಲ್ಲಿ 90 ದಂತವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕುಮಾರಿ ನಿಖಿತಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಸ್ವಾಗತಿಸಿದರು. ಡಾ.ನಿವೇದಿತಾ ಮಂಕಣಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಆರತಿ ಕೊರೆಗೋಳ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಪ್ರವೀಣಕುಮಾರ ವಂದಿಸಿದರು. ಡಾ.ಚಂದನಾ, ಡಾ.ಸುಬ್ರಮಣಿಯಮ್ ರಾವ್ ಮತ್ತು ಡಾ.ಸೌಮ್ಯ ಅಲ್ಲೂರಕರ್ ನಿರೂಪಿಸಿದರು.