ಹಣ ಗಳಿಸುವುದು ಧರ್ಮಸಂಸ್ಥೆಗಳ ಗುರಿಯಾಗಬಾರದು: ಕೈವಾರ ಧರ್ಮಾಧಿಕಾರಿ ಡಾ.ಜಯರಾಮ್

KannadaprabhaNewsNetwork |  
Published : Jun 22, 2025, 11:47 PM IST
ಕೈವಾರ  | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ, ತ್ಯಾಗರಾಜ ಸ್ವಾಮಿಗಳ, ಕನಕದಾಸರ, ಪುರಂದರದಾಸರ, ಅನ್ನಮಯ್ಯ ಹಾಗೂ ಹಲವಾರು ಕೀರ್ತನೆಕಾರರ ಕೀರ್ತನೆಗಳನ್ನು ಸಂಗೀತ ವಿದ್ವಾಂಸರು ಸುಶ್ರಾವ್ಯವಾಗಿ ಹಾಡಿದರು. ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನವು ನಡೆಯಿತು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಹಣ ಗಳಿಸುವುದು ಧರ್ಮ ಸಂಸ್ಥೆಗಳ ಗುರಿಯಾಗಬಾರದು, ಧರ್ಮವನ್ನು ಸಮಾಜದಲ್ಲಿ ಪಸರಿಸುವುದೇ ಧರ್ಮ ಸಂಸ್ಥೆಗಳ ಉದ್ದೇಶ ಮತ್ತು ಗುರಿಯಾಗಬೇಕೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ನಡೆದ ಶ್ರೀಯೋಗಿನಾರೇಯಣ ಸಂಗೀತ ಕಲೆ ಮತ್ತು ಶಿಕ್ಷಣ ಟ್ರಸ್ಟ್ ನ ನಾಲ್ಕನೇ ವಾರ್ಷಿಕೋತ್ಸವದ ಭಕ್ತಿಗಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂತರು ತೋರಿದ ನಿಸ್ವಾರ್ಥದ ಬದುಕಿನ ಸಂದೇಶವನ್ನು ಪಾಲಿಸಬೇಕು. ಯಾವ ಧರ್ಮವನ್ನು ನಾವು ಪಾಲಿಸಬೇಕಾಗಿತ್ತೋ, ಅದನ್ನು ಪಾಲಿಸದೇ ಕೇವಲ ಸ್ವಾರ್ಥಕ್ಕೆ ಧರ್ಮವನ್ನು ಬಳಸಿಕೊಂಡಾಗ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಸಮಾಜದಲ್ಲಿ ಬೇಧವಿಲ್ಲದೆ ಸಾಮರಸ್ಯದಿಂದ ಕೂಡಿದ್ದರೆ ಅದೇ ಸನಾತನ ಧರ್ಮ. ಸಂತರ ಉದ್ದೇಶವೂ ಇದೇ ಆಗಿದೆ. ನಾವು ಪುರಂದರದಾಸರಾಗಲು, ಕನಕದಾಸರಾಗಲು, ಕೈವಾರದ ತಾತಯ್ಯನವರಾಗಲು ಸಾಧ್ಯವಿಲ್ಲ, ಆದರೆ ಅವರ ತತ್ವ- ಬೋಧನೆಗಳನ್ನು ನಂಬಿ ಅವರಲ್ಲಿ ಶರಣಾಗಬೇಕೆಂದರು.

ಶ್ರೀಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಕಲ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಸಂಗೀತವು ಒಂದು ಪ್ರಾಚೀನವಾದ ವೈಶಿಷ್ಟ್ಯಗಳಿಂದ ಕೂಡಿರುವ ಕಲೆ. ಹಲವಾರು ಸತ್ಪುರುಷ ದಾಸವರೇಣ್ಯರು ಭಗವಂತನನ್ನು ಸ್ತುತಿಸಿ ಕೊಂಡಾಡುತ್ತಾ, ಅಂತರಂಗದಲ್ಲಿ ಮೂಡಿಬಂದ ಪದಗಳ ಸಮೂಹವನ್ನು ಕೀರ್ತನೆಗಳ ರೂಪದಲ್ಲಿ ರಚಿಸಿದ್ದಾರೆ. ಆ ಕೀರ್ತನೆಗಳನ್ನು ಭಕ್ತಿಭಾವದಿಂದ ಸಮರ್ಪಿಸುವ ವಿದ್ಯೆಯೇ ಸಂಗೀತ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥೆ ಲಕ್ಷ್ಮೀ ಕೆಂಪರಾಜ್ ಮಾತನಾಡಿ, ಸಂಗೀತವೆಂಬುದು ಒಂದು ದೈವವಿದ್ಯೆ. ನಾನು ಕಲಿತ ವಿದ್ಯೆ ಸಮಾಜಕ್ಕೆ ತಲುಪಿಸಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಂಗೀತ ಕಲೆಯನ್ನು ಪಸರಿಸುವ ಅಭಿಲಾಷೆಯಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಹಕಾರವನ್ನು ನೀಡುತ್ತಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆಂದರು.

ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ, ತ್ಯಾಗರಾಜ ಸ್ವಾಮಿಗಳ, ಕನಕದಾಸರ, ಪುರಂದರದಾಸರ, ಅನ್ನಮಯ್ಯ ಹಾಗೂ ಹಲವಾರು ಕೀರ್ತನೆಕಾರರ ಕೀರ್ತನೆಗಳನ್ನು ಸಂಗೀತ ವಿದ್ವಾಂಸರು ಸುಶ್ರಾವ್ಯವಾಗಿ ಹಾಡಿದರು. ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನವು ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಮೂಡಿಬಂದವು, ನಿರೂಪಣೆಯನ್ನು ಶಿಕ್ಷಕಿ ಪರಿಮಳ ಮಂಜುನಾಥ್ ನಡೆಸಿಕೊಟ್ಟರು ಮತ್ತು ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕೈವಾರ ಟ್ರಸ್ಟ್ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಚಿಂತಾಮಣಿ ಸಂಗೀತ ಶಾಲೆಯ ಪ್ರಾಂಶುಪಾಲರಾದ ಪದ್ಮಾವತಿ, ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಕೈವಾರ ರಾಮಣ್ಣ, ಸಂಗೀತ ವಿದ್ವಾಂಸರಾದ ಕೆ.ರಾಮಕುಮಾರ್ ಬಾರಧ್ವಾಜ್ ಕೈವಾರ, ಶ್ಯಾಮಸುಂದರ್ ಶಿಡ್ಲಘಟ್ಟ, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಆರ್.ವಿಜಯಲಕ್ಷ್ಮೀ, ಎನ್.ಕೆಂಪರಾಜ್, ಕೆ.ಎನ್.ರವಿ, ಕೆ.ಶಿಲ್ಪ, ಮುನಿವೆಂಕಟರಮಣಪ್ಪ, ಎನ್.ಶಂಕರ್ ಹಾಗೂ ಸಂಗೀತ ಕಲಾವಿದರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ