ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಡಿಡಿಪಿಐ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ನಡೆಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳ ಪ್ರಶ್ನೆಗಳಿಗೆ ಡಿಡಿಪಿಐ ಅವರೇ ಸ್ವತಃ ಉತ್ತರ ನೀಡಿ ಮಾತನಾಡಿದರು.
ಮುಖ್ಯಶಿಕ್ಷಕರ ಸಭೆಗಳನ್ನು ನಡೆಸಿ ಪರೀಕ್ಷಾ ಸಿದ್ಧತೆಗಳಿಗೆ ಮಾರ್ಗದರ್ಶನ ನೀಡಲಾಗಿದೆ, ಆದರೂ ಕೆಲವು ಮಕ್ಕಳಲ್ಲಿ ಇರಬಹುದಾದ ಗೊಂದಲ ನಿವಾರಣೆಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗಿದೆ ಎಂದರು.ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ, ಸಿಸಿ ಕ್ಯಾಮೆರಾ ಅಳವಡಿಕೆ, ವೆಬ್ ಕಾಸ್ಟಿಂಗ್ ವ್ಯವಸ್ಥೆ, ಕೇಂದ್ರದಲ್ಲಿ ನಕಲು ತಡೆಯಲು ಇರುವ ಅಧಿಕಾರಿ, ಸಿಬ್ಬಂದಿಯಿಂದ ಒತ್ತಡ ಎದುರಾಗುವುದೇ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಡಿಡಿಪಿಐ ಅವರು ಕೆಲವು ಮಕ್ಕಳಿಗೆ ಉತ್ತರ ನೀಡಿ, ಕೇಂದ್ರದಲ್ಲಿ ಸಿಸಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ಇದೆ, ಜತೆಗೆ ನಕಲು ತಡೆಗೆ ಕ್ರಮವಹಿಸಿರುವುದು ನಿಜವಾದರೂ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ಮುಜುಗರವಾಗದಂತೆ ಕ್ರಮವಹಿಸಲಾಗಿದೆ, ಮಕ್ಕಳನ್ನು ಅನಗತ್ಯವಾಗಿ ತಪಾಸಣೆಗೆ ಒಳಪಡಿಸಿ ಆತಂಕ ಸೃಷ್ಟಿಸುವ ಕೆಲಸ ಮಾಡುವುದಿಲ್ಲ, ಪರೀಕ್ಷೆಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವುದಾಗಿ ತಿಳಿಸಿದರು.
ಶೇ.೧೦೦ ಸಾಧನೆಗೆ ಶಿಕ್ಷಕರು ಹೇಳುವ ಪಾಠದ ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ ಅದರಿಂದ ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದ್ದು, ಆಗ ಶೇ.೧೦೦ರಷ್ಟು ಸಾಧನೆ ಮಾಡಬಹುದು ಎಂದು ತಿಳಿಸಿದರು.
ವಿಜ್ಞಾನ ವಿಷಯದ್ದೇ ಅತಿ ಹೆಚ್ಚು ಪ್ರಶ್ನೆ:
ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ೧೧೦ ಪ್ರಶ್ನೆ, ಇಂಗ್ಲಿಷ್ ವಿಷಯಕ್ಕೆ ೧೭೮ ಪ್ರಶ್ನೆ, ಹಿಂದಿಗೆ ೭೯ ಪ್ರಶ್ನೆ, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ೧೩೦, ವಿಜ್ಞಾನ ವಿಷಯಕ್ಕೆ ೧೮೦ ಪ್ರಶ್ನೆ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ೧೪೦ ಹಾಗೂ ಉರ್ದು ವಿಷಯಕ್ಕೆ ೨೫ ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ವೀಣಾ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಸಂಪನ್ಮೂಲ ಶಿಕ್ಷಕರಾದ ಬಿ.ಕೆ.ನಾಗರಾಜ್, ವೇಣುಗೋಪಾಲ್, ರಾಜಣ್ಣ, ಬಿ.ಎ.ಕವಿತಾ, ರಮಾ, ಕೃಷ್ಣಮೂರ್ತಿ, ಪ್ರಭಾ, ಎಸ್.ಭಾಗ್ಯ, ಬಸವರಾಜ್, ಶ್ರೀನಿವಾಸಗೌಡ, ನರಸಿಂಹಪ್ರಸಾದ್, ಅಮರೇಶಬಾಬು,ಗಂಗಾಧರಮೂರ್ತಿ, ರಾಜರೆಡ್ಡಿ, ವಜಿಹ್ ಸುಲ್ತಾನಾ, ಫರೀದಾ ಬೇಗಂ ಹಾಜರಿದ್ದು, ಮಕ್ಕಳ ದೂರವಾಣಿ ಕರೆ ಸ್ವೀಕರಿಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.