ಗದಗ/ಹೊಳೆಆಲೂರ: ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಪಕ್ಕದ ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ಮತ್ತು ಬೆಣ್ಣೆಹಳ್ಳದುದ್ದಕ್ಕೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಅಲ್ಲಲ್ಲಿ ಮಳೆ ಕಡಿಮೆಯಾಗಿದ್ದರೂ ಹೊಳೆಆಲೂರು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಪ್ರವಾಹದ ಆತಂಕ ಮುಂದುವರಿದಿದೆ.ಗದಗ ಮತ್ತು ಧಾರವಾಡ ಭಾಗದಲ್ಲಿ ಸುರಿದ ಮಳೆ ಹತ್ತಾರು ರೀತಿಯ ಸಮಸ್ಯೆ ಸೃಷ್ಟಿ ಮಾಡಿದೆ. ಅದರಲ್ಲಿಯೂ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಲೇ ಇದೆ. ನವಿಲುತೀರ್ಥ ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣದ ನೀರು ನದಿ ಪಾತ್ರಕ್ಕೆ ಹರಿಸಿದರೆ ಸಾವಿರಾರು ಕುಟುಂಬಗಳ ಬದುಕು ಮತ್ತೆ ಸಂಪೂರ್ಣ ಮೂರಾಬಟ್ಟೆಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.
ಅಲ್ಲಲ್ಲಿ ನುಗ್ಗಿದ ನೀರು: ಮಲಪ್ರಭಾ ನದಿ ಪಾತ್ರದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಅದರೊಟ್ಟಿಗೆ ಹುಬ್ಬಳ್ಳಿ-ಧಾರವಾಡದ ಮಳೆಯಿಂದ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದ ನೀರು ಮಲಪ್ರಭಾ ನದಿಗೆ ಬಂದು ಸೇರುವುದು ಜಿಲ್ಲೆಯ ಮೆಣಸಗಿ ಗ್ರಾಮದ ಬಳಿ. ನದಿಯಲ್ಲಿ ವ್ಯಾಪಕ ಪ್ರಮಾಣದ ನೀರಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಮೆಣಸಗಿ, ಹೊಳೆಆಲೂರು ಸೇರಿದಂತೆ ಹಲವಾರು ಗ್ರಾಮಗಳ ಮನೆಗಳಿಗೆ ನುಗ್ಗಿದೆ. ಇನ್ನು ಹಲವು ಮನೆಗಳ ಮುಂದೆ ನೀರು ಆವರಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.ಬೆಳೆಗಳು ಆಪೋಷನ: ಹೊಳೆಆಲೂರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ನದಿ ತಟದಲ್ಲಿಯೇ ಇದ್ದು, ಅಲ್ಲಿನ ರೈತರು ಬೆಳೆದಿರುವ ಲಕ್ಷಾಂತರ ಮೌಲ್ಯದ ಬೆಳೆಗಳು ಪ್ರವಾಹದ ನೀರಿಗೆ ಸಿಲುಕಿ ಸಂಪೂರ್ಣ ನೆನೆದು ಹೋಗಿದೆ. ನದಿ ತಟದ ರೈತರ ಬೆಳೆ ನುಂಗಿ ನಾಶ ಮಾಡಿದ ಪ್ರವಾಹ ಈಗ ಗ್ರಾಮಗಳತ್ತ ಧಾವಿಸುತ್ತಿದೆ. ಹೊಳೆಆಲೂರಿನಿಂದ ಗಾಡಗೋಳಿ, ಹೊಳೆಮಣ್ಣೂರ ಹಳೆಯ ಗ್ರಾಮಗಳಿಗೆ ಹೋಗುವ ರಸ್ತೆ ಪ್ರವಾಹದಿಂದ ಸ್ಥಗಿತಗೊಂಡಿದೆ. ಇತ್ತ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ ತೆರಳುವ ರಸ್ತೆಯು ಪ್ರವಾಹದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಹೊಳೆಆಲೂರ ಉಮಾ ಮಹೇಶ್ವರ ದೇವಸ್ಥಾನದ ಬಾಗಿಲ ವರೆಗೂ ಪ್ರವಾಹದ ನೀರು ಬಂದಿದೆ. ಇನ್ನು ಹಾದಿ ಬಸವಣ್ಣ ದೇವಸ್ಥಾನದ ಸುತ್ತ ಪ್ರವಾಹ ನೀರು ಆವರಿಸಿದ್ದು, ಸಹಜವಾಗಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೊಳೆಆಲೂರು ಸಮೀಪದಲ್ಲಿರುವ ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಕೂರವಿನಕೊಪ್ಪ ಹಳೆಯ ಗ್ರಾಮಕ್ಕೆ ಹೋಗುವ ರಸ್ತೆಯು ಶನಿವಾರವೇ ಸಂಪೂರ್ಣ ಬಂದಾಗಿದ್ದು, ಆ ಗ್ರಾಮದಲ್ಲಿನ ಜನರು ಈಗಾಗಲೇ ನವಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ರಾತ್ರಿ ಇನ್ನು ಹೆಚ್ಚಿನ ಮಳೆಯಾದರೆ ಅಥವಾ ಜಲಾಶಯದಿಂದ ಹೆಚ್ಚಿನ ನೀರು ನದಿ ಪಾತ್ರಕ್ಕೆ ಬಿಟ್ಟರೆ, ಹಳೆಯ ಗ್ರಾಮಗಳು ಸಂಪೂರ್ಣ ಮುಳುಗುವ ಸಾದ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.ಎಚ್ಚರಿಕೆ: ನದಿ ತಟದ ಗ್ರಾಮಗಳ ಗ್ರಾಪಂಗಳು ಈಗಾಗಲೇ ಪ್ರತಿಯೊಂದು ಗ್ರಾಮಗಳಲ್ಲಿಯೂ ಡಂಗುರ ಸಾರಿದ್ದು, ಎಚ್ಚರಿಕೆ ಸಂದೇಶ ನೀಡಿದ್ದಾರೆ. ತಾಲೂಕಿನ ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ನದಿ ಹತ್ತಿರ ಹೋಗದಂತೆ ರೋಣ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದಲ್ಲದೇ ಪ್ರಮುಖ ಅಪಾಯಕಾರಿ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪ್ರಮುಖ ಸ್ಥಳಗಳಿಗೆ ರೋಣ ತಹಸೀಲ್ದಾರ್ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ಹೊಳೆಮಣ್ಣೂರ ಮತ್ತು ಗಾಡಗೋಳಿ ಭಾಗದಲ್ಲಿ ಗ್ರಾಪಂದಿಂದ ಎಚ್ಚರಿಕೆ ಸಂದೇಶ ನೀಡಿದ್ದು, ಯಾರು ನದಿ ಹತ್ತಿರ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಜಲಾಶಯದ ನೀರು ಹಾಗೂ ಬೆಣ್ಣೆಹಳ್ಳದ ಏರಿಕೆ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೊಳೆಮಣ್ಣೂರ ಪಿಡಿಒ ಶಿವನಗೌಡ ಮೆಣಸಗಿ ಹೇಳಿದರು.