ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕು ಆಡಳಿತ ವತಿಯಿಂದ ಏ.14ರಂದು ನಡೆಯಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಮನವಿ ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರ ಜ್ಞಾನವನ್ನು ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದೆ. ಜಯಂತಿ ಕೇವಲ ಆಚರಣೆಗೆ ಸೀಮಿತಗೊಳ್ಳದೇ ಅವರ ಚಿಂತನೆಗಳು ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ದಾರಿದೀಪವಾಗುವಂತೆ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗುವುದು ಎಂದರು.
ಏ.14ರಂದು ಜಾನಪದ ಕಲಾಮೇಳದೊಂದಿಗೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಗೆಯನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಸಲಾಗುವುದು ನಂತರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಂಪನ್ಮೂಲ ವ್ಯಕ್ತಿಯಿಂದ ಪ್ರಧಾನ ಭಾಷಣವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಪೂರ್ವಭಾವಿ ಸಭೆಯಲ್ಲಿ ಮುಖಂಡರು ತಿಳಿಸಿರುವ ಸಲಹೆಗಳನ್ನು ಪರಿಗಣಿಸಲಾಗುವುದು, ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುವಂತೆ ಸೂಚಿಸಲಾಗುವುದು, ತಾಲೂಕಿನ ಎಲ್ಲಾ ಸಂಘಟನೆ ಮುಖಂಡರು ಹಾಗೂ ವಿವಿಧ ಪಕ್ಷಗಳ ಮುಖಂಡರನ್ನು ಸಮಾರಂಭಕ್ಕೆ ಭಾಗವಹಿಸುವಂತೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ರಾಷ್ಟ್ರಕ್ಕೆ ಸಂವಿಧಾನ ಕೊಟ್ಟ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಎಲ್ಲರು ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.ಸಭೆಯಲ್ಲಿ ಮುಖಂಡ ಮಾರ್ಕಾಲು ಮಾಧು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ಬಾಬುಜಗಜೀವನ್‌ರಾಂ ಹಾಗೂ ಅಂಬೇಡ್ಕರ್ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕೆಂದು ಹೇಳಿದರು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಎಲ್ಲಾ ಸಮುದಾಯದ ಜನರನ್ನು ಜಯಂತಿಗೆ ಆಹ್ವಾನಿಸಬೇಕು, ಜಾತ್ಯಾತೀತವಾಗಿ ಸಾಧಕರನ್ನು ಸನ್ಮಾನಿಸಬೇಕು. ವಸತಿ ನಿಲಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಬೇಕೆಂದು ಸಲಹೆ ನೀಡಿದರು.ಪುರಸಭೆ ಮಾಜಿ ಸದಸ್ಯ ಕಿರಣ್‌ಶಂಕರ್ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಸ್ವಚ್ಚತೆ ಇಲ್ಲ. ಕೂಡಲೇ ಪುರಸಭೆ ಅಧಿಕಾರಿಗಳು ಆವರಣವನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕು. ವಾಹನವನ್ನು ನಿಲ್ಲಿಸದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕ ಸಂತೋಷ್‌ಕುಮಾರ್ ಸೇರಿದಂತೆ ಇತರರು ಇದ್ದರು.