ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಾನುವಾರುಗಳನ್ನು ಬೆಂಕಿಯ ಮೂಲಕ ಹಾಯಿಸುವ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿನ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕೊಬ್ಬರಿ, ಕಬ್ಬು ನೀಡಿ ಆಚರಣೆ ಮಾಡಿದರು.
ರೈತರು ತಮ್ಮ ರಾಸುಗಳ ಕೊಂಬುಗಳಿಗೆ ವಿವಿಧ ಬಗೆಯ ಬಣ್ಣ ಬಳಿದು ಹೂವು ಮತ್ತು ಬಲೂನ್ ಸೇರಿದಂತೆ ಹಲವು ರೀತಿಯ ಅಲಂಕಾರಿಕ ವಸ್ತುಗಳಿಂದ ಶೃಂಗಾರ ಮಾಡಿ ಸೂರ್ಯ ಮುಳುಗುವ ವೇಳೆ ಸಂಪ್ರದಾಯದಂತೆ ಸಂಕ್ರಮಣನಿಗೆ ಪೂಜೆ ಸಲ್ಲಿಸಿ ನಂತರ ‘ಪೊಂಗಲ್’ ಎರಚಿ ರಾಸುಗಳನ್ನು ರೈತರು ಬೆಂಕಿಯಲ್ಲಿ ಕಿಚಾಯಿಸಿದರು.ಪಟ್ಟಣದ ಪೇಟೆ ಒಕ್ಕಲಗೇರಿಯ ಟೋಲ್ ಗೇಟ್, ಕನಕಪುರ ರಸ್ತೆ, ಸುಲ್ತಾನ್ ರಸ್ತೆ, ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ ಸೇರಿದಂತೆ ವಿವಿಧೆಡೆ ಹಾಗೂ ತಾಲ್ಲೂಕಿನ ಎಲ್ಲ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಹಲವೆಡೆ ಖಾಸಗಿ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಾಲೂಕಿನ ಗಿಲ್ಲಿ ನಟ ಗೆಲುವು ಸಾಧಿಸಲಿ ಎಂದು ಭಾವಚಿತ್ರ ಹಿಡಿದು ರಾಸುಗಳೊಂದಿಗೆ ಪೋಟೋ ತೆಗೆಸಿಕೊಂಡರು. ಪಟ್ಟಣದ ಪೇಟೆ ಬೀದಿಯಲ್ಲಿ ಸಚಿನ್ ಎಂಬ ಯುವ ರೈತ ತಮ್ಮ ರಾಸುಗಳಿಗೆ ಚೆರಿ ಹಣ್ಣಿನ ಹಾರ ಹಾಕಿ ಜನರ ಗಮನ ಸೆಳೆಯಿತು.