ವಿಧಾನ ಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಜಿಲ್ಲೆಯ ಮಳವಳ್ಳಿ ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಮೇಲ್ಮನೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಇಬ್ಬರು ಏಕಕಾಲಕ್ಕೆ ಮೇಲ್ಮನೆ ಪ್ರವೇಶಿಸಿರುವುದು ಇದೇ ಮೊದಲು. ಅದೇ ರೀತಿ ವಿಧಾನ ಪರಿಷತ್‌ನಲ್ಲಿ ಐವರು ವಿಧಾನ ಪರಿಷತ್ ಸದಸ್ಯರಿರುವುದೂ ಕೂಡ ದಾಖಲೆಯಾಗಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನ ಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಜಿಲ್ಲೆಯ ಮಳವಳ್ಳಿ ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಮೇಲ್ಮನೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಇಬ್ಬರು ಏಕಕಾಲಕ್ಕೆ ಮೇಲ್ಮನೆ ಪ್ರವೇಶಿಸಿರುವುದು ಇದೇ ಮೊದಲು. ಅದೇ ರೀತಿ ವಿಧಾನ ಪರಿಷತ್‌ನಲ್ಲಿ ಐವರು ವಿಧಾನ ಪರಿಷತ್ ಸದಸ್ಯರಿರುವುದೂ ಕೂಡ ದಾಖಲೆಯಾಗಿದೆ.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸ್ಥಾನಗಳ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಬಂಪರ್ ಹೊಡೆದಿರುವುದಾಗಿ ಭಾವಿಸಲಾಗಿತ್ತು. ಅದು ಈಗ ನಿಜವಾಗಿದೆ. ಕೆ.ಆರ್.ಪೇಟೆ ಕ್ಷೇತ್ರದ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಪುತ್ರ ಮನ್ಸೂರ್ ಆಲಿಖಾನ್ ಅವರು ರಾಜ್ಯಸಭೆಗೆ ನಿರಾಯಾಸವಾಗಿ ಪ್ರವೇಶ ಪಡೆದಿದ್ದರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಳವಳ್ಳಿ ಕ್ಷೇತ್ರದ ದಡದಪುರ ಶಿವಣ್ಣ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿ ಸಾಹುಕಾರ್ ಚನ್ನಯ್ಯನವರ ಮೊಮ್ಮಗ ಹಾಗೂ ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಕೂಡ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್‌ಗೆ ನಾಲ್ಕನೇ ಅಭ್ಯರ್ಥಿಯಾಗಿದ್ದ ದಡದಪುರ ಶಿವಣ್ಣನವರ ಆಯ್ಕೆ ನಿರೀಕ್ಷಿತವಾಗಿತ್ತು. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿಯ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದ್ದರು.
ವಿನಯ್ ಕಾರ್ತಿಕ್ ಗೆಲುವಿಗೆ ಎರಡರಿಂದ ಮೂರು ಮತಗಳು ಬೇಕಿದ್ದವು. ರಣತಂತ್ರ ರೂಪಿಸಿ ತಮ್ಮ ಆಪ್ತರಲ್ಲೊಬ್ಬರಾದ ವಿನಯ್ ಕಾರ್ತಿಕ್ ಅವರಿಗೆ ೩೨ ಮತಗಳನ್ನು ದೊರಕಿಸಿ ಗೆಲ್ಲಿಸಿಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ವಿನಯ್ ಕಾರ್ತಿಕ್ ಗೆಲುವು ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ನಾಲ್ವರು ಅಭ್ಯರ್ಥಿಗಳು ೩೦ ಮತಗಳನ್ನು ಗಳಿಸಿದ್ದರೆ ವಿನಯ್ ಕಾರ್ತಿಕ್ ೩೨ ಮತ ಗಳಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುವಂತೆ ಮಾಡಿದೆ.
ಜಿಲ್ಲೆಯ ಹಿರಿಯ ರಾಜಕಾರಣಿ ಸಾಹುಕಾರ್ ಚನ್ನಯ್ಯನವರ ಮೊಮ್ಮಗನಾಗಿರುವ ವಿನಯ್ ಕಾರ್ತಿಕ್ ಪ್ರಸ್ತುತ ಕೆಪಿಸಿಸಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್ ಭಾರತ್ ಜೋಡೋ ಯಾತ್ರೆ ಹಾಗೂ ಮೇಕೆದಾಟು ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿನಯ್ ಕಾರ್ತಿಕ್ ಅವರನ್ನು ಐದನೇ ಅಭ್ಯರ್ಥಿಯಾಗಿ ಪರಿಷತ್ ಕಣಕ್ಕಿಳಿಸಿದ್ದರು. ಕದನದಲ್ಲಿ ವಿನಯ್ ಕಾರ್ತಿಕ್ ರೋಚಕ ಗೆಲುವನ್ನು ಕಂಡಿದ್ದಾರೆ.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಳವಳ್ಳಿ ತಾಲೂಕಿನ ದಡದಪುರ ಶಿವಣ್ಣ ಕೂಡ ಸುಗಮವಾಗಿ ಪರಿಷತ್ ಪ್ರವೇಶಿಸಿದ್ದಾರೆ. ಶ್ರೀರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಶಿವಣ್ಣ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲೂ ಸಕ್ರಿಯರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದುವರೆಗೂ ಜಿಲ್ಲೆಯಿಂದ ಹಿಂದುಳಿದ ವರ್ಗ ಕುರುಬ ಸಮುದಾಯಕ್ಕೆ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ದೊರಕಿರಲಿಲ್ಲ. ಇದೀಗ ದಡದಪುರ ಶಿವಣ್ಣ ಅವರು ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಅದೃಷ್ಟ ಒಲದುಬಂದಿದೆ.
೧೯೯೯ರಲ್ಲಿ ಮಳವಳ್ಳಿಯ ಕಿರುಗಾವಲು ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಶಿವಣ್ಣ ಸ್ಪರ್ಧಿಸಿದ್ದರು. ಆ ನಂತರ ರಾಜಕೀಯ ಸ್ಥಿತ್ಯಂತರಗಳಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರಿಂದ ಶಿವಣ್ಣ ಕೂಡ ಕಾಂಗ್ರೆಸ್ ಸೇರ್ಪಡೆಯಾದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವಿಲೀನಗೊಂಡ ನಂತರ ಆಕಾಂಕ್ಷಿಯಾಗಿದ್ದರು. ಆದರೆ, ಮೀಸಲು ಕ್ಷೇತ್ರವಾಗಿದ್ದರಿಂದ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂದುವರೆದಿದ್ದರು.
ಜಿಲ್ಲೆಗೆ ಐವರು ವಿಧಾನ ಪರಿಷತ್ ಸದಸ್ಯರು
ವಿಧಾನ ಪರಿಷತ್ ಚುನಾವಣೆಯಲ್ಲಿ ದಡದಪುರ ಶಿವಣ್ಣ ನಾಲ್ಕನೇ ಅಭ್ಯರ್ಥಿಯಾಗಿ, ವಿವೇಕ್ ಕಾರ್ತಿಕ್ ಐದನೇ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದರೊಂದಿಗೆ ಜಿಲ್ಲೆಯ ಒಟ್ಟು ವಿಧಾನ ಪರಿಷತ್ ಸದಸ್ಯರ ಸಂಖ್ಯೆ ಐದಕ್ಕೇರಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದೊಳಗೆ ಸ್ಥಳೀಯ ಸಂಸ್ಥೆಗಳಿಂದ ದಿನೇಶ್‌ಗೂಳಿಗೌಡ, ದಕ್ಷಿಣ ಪದವೀಧರ ಕ್ಷೇತ್ರದಿಂದ ಮಧು ಜಿ.ಮಾದೇಗೌಡ ಸದಸ್ಯರಾಗಿದ್ದು, ಇವರೊಂದಿಗೆ ದಡದಪುರ ಶಿವಣ್ಣ, ವಿನಯ್‌ಕಾರ್ತಿಕ್ ಸೇರ್ಪಡೆಗೊಂಡಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಬಿ.ವಿವೇಕಾನಂದ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ನಾಲ್ವರು ಹಾಗೂ ಜೆಡಿಎಸ್‌ನಿಂದ ಒಬ್ಬರು ಮೇಲ್ಮನೆಯಲ್ಲಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ.
ರಾಜ್ಯಸಭೆ ಪ್ರವೇಶಿಸಿದ ಮನ್ಸೂರ್ ಆಲಿಖಾನ್
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮನ್ಸೂರ್ ಅಲಿಖಾನ್ ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ಮನ್ಸೂರ್ ಆಲಿಖಾನ್ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್‌ಖಾನ್ ಅವರ ಪುತ್ರ. ಕೆ.ರೆಹಮಾನ್‌ಖಾನ್ ಅವರು ಕೆ.ಆರ್.ಪೇಟೆ ಕ್ಷೇತ್ರದಿಂದಲೇ ರಾಜ್ಯಸಭೆ ಪ್ರವೇಶಿಸಿ ಕೇಂದ್ರದ ಅಂದಿನ ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಹೈಕಮಾಂಡ್ ನಾಯಕರೊಂದಿಗೆ ಉತ್ತಮ ನಿಕಟ ಸಂಪರ್ಕ ಹೊಂದಿದ್ದರು. ಇದೇ ಕಾರಣಕ್ಕೆ ಅವರ ಪುತ್ರ ಮನ್ಸೂರ್ ಅಲಿಖಾನ್‌ಗೆ ರಾಜ್ಯಸಭೆ ಪ್ರವೇಶಕ್ಕೆ ಕೈ ಹೈಕಮಾಂಡ್ ಅವಕಾಶ ಕಲ್ಪಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೆ.ಆರ್.ಪೇಟೆ ಮೂಲದವರಾಗಿದ್ದರೂ ಮನ್ಸೂರ್ ಆಲಿಖಾನ್ ಹಾಲಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಮತದಾರರಾಗಿದ್ದಾರೆ. ಕಳೆದ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ತಂದೆಗೆ ನೀಡಿದ್ದ ಅವಕಾಶವನ್ನು ಪುತ್ರನಿಗೂ ನೀಡಿರುವುದರಿಂದ ಮನ್ಸೂರ್ ತಂದೆಯ ಹಾದಿಯಲ್ಲೇ ಮುನ್ನಡೆದಿದ್ದಾರೆ.
ರಾಜ್ಯಸಭೆಗೆ ಮನ್ಸೂರ್ ಅಲಿಖಾನ್, ವಿಧಾನ ಪರಿಷತ್‌ಗೆ ಮಳವಳ್ಳಿಶಿವಣ್ಣ, ವಿನಯ್ ಕಾರ್ತಿಕ್ ಆಯ್ಕೆ ಸಂತಸ ತಂದಿದೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುವುದಕ್ಕೆ ಹೆಚ್ಚಿನ ಅವಕಾಶವನ್ನು ಕಾಂಗ್ರೆಸ್ ನಾಯಕರು ಕಲ್ಪಿಸಿದ್ದಾರೆ. ಅಭಿವೃದ್ಧಿಗೆ ಸಹಕಾರ ನೀಡುತ್ತಿರುವಂತೆ ಜಿಲ್ಲೆಯವರಿಗೂ ರಾಜಕೀಯ ಅವಕಾಶಗಳನ್ನು ಕಲ್ಪಿಸಿರುವ ಹೈಕಮಾಂಡ್ ನಾಯಕರು, ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.