ನಕಲಿ ಪ್ರಮಾಣ ಪತ್ರ ಸಲ್ಲಿಸಿ, ನಗರದಲ್ಲಿಅಕ್ರಮ ವಾಸ : ಮಲೇಷ್ಯಾ ವ್ಯಕ್ತಿಗೆ 1 ವರ್ಷ ಜೈಲು, ₹1.5 ಲಕ್ಷ ದಂಡ

KannadaprabhaNewsNetwork | Updated : Nov 02 2024, 11:44 AM IST

ಸಾರಾಂಶ

ನಕಲಿ ಪ್ರಮಾಣ ಪತ್ರ ಸಲ್ಲಿಸಿ, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಲೇಷ್ಯಾ ಮೂಲದ ವೈದ್ಯ ವಿದ್ಯಾರ್ಥಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

 ದಾವಣಗೆರೆ : ನಕಲಿ ಪ್ರಮಾಣ ಪತ್ರ ಸಲ್ಲಿಸಿ, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಲೇಷ್ಯಾ ಮೂಲದ ವೈದ್ಯ ವಿದ್ಯಾರ್ಥಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮಲೇಷ್ಯಾ ಮೂಲದ ಕೆ.ವಿಜಯಕುಮಾರ ಶಿಕ್ಷೆಗೆ ಗುರಿಯಾದ ಅಪರಾಧಿ. 1995ರ ಆ.16ರಂದು ಮೊದಲ ವರ್ಷದ ಎಂಬಿಬಿಎಸ್‌ ತರಗತಿಗೆ ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿಗೆ ವಿಜಯಕುಮಾರ ದಾಖಲಾಗಿದ್ದ. ಅನಂತರ ಭಗತ್ ಸಿಂಗ್ ನಗರದಲ್ಲಿ ವಾಸವಾಗಿದ್ದ ಆತ, ಭಾರತೀಯ ಪ್ರಜೆಯಾದ ತ್ರಿವೇಣಿ ಶಾನಭಾಗ್ ಎಂಬವರನ್ನು ರಿಜಿಸ್ಟರ್ ಮದುವೆಯಾಗಿದ್ದ.

ವೈದ್ಯಕೀಯ ಶಿಕ್ಷಣದಲ್ಲಿ ಅನುತ್ತೀರ್ಣನಾದರೂ ತಾನು ಎಂ.ಡಿ. ವ್ಯಾಸಂಗ ಮಾಡುತ್ತಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾಲೇಜಿನಿಂದ ನೀಡಿದ್ದು ಎನ್ನಲಾದ ಬೋನಫೈಡ್ ಪ್ರಮಾಣ ಪತ್ರಗಳು ನಕಲಿ ಪ್ರಮಾಣಪತ್ರಗಳಾಗಿದ್ದು, ಅದರಲ್ಲಿ ಕಾಲೇಜು ಪ್ರಾಚಾರ್ಯರ ಸಹಿಯನ್ನೂ ಪೋರ್ಜರಿ ಮಾಡಿದ್ದನು. ಅಲ್ಲದೇ, ತಾನು ವಾಸ ಮುಂದುವರಿಸುವ ಸಲುವಾಗಿ ಎಕ್ಸ್ ವೀಸಾ ಪಡೆಯದೇ, ಭಾರತದಲ್ಲಿರಲು ಅವಕಾಶ ಇದ್ದರೂ ಸರಿಯಾದ ವೀಸಾ ಹೊಂದದೇ ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ. ಈ ಬಗ್ಗೆ ತನಿಖೆ ನಡೆಸಿದ್ದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ರಮೇಶ ರಾವ್ ಅವರು ಕೆಟಿಜೆ ನಗರ ಪೊಲೀಸ್ ಠಣೆಗೆ ದೂರು ನೀಡಿದ್ದರು.

ವಿಜಯಕುಮಾರ ಅಕ್ರಮವಾಗಿ ನೆಲೆಸಿದ್ದ ಬಗ್ಗೆ ತನಿಖೆ ನಡೆಸಿದ್ದ ತನಿಖಾಧಿಕಾರಿ ಎಂ.ಶಿವಪ್ರಸಾದ್‌ ನ್ಯಾಯಾಲಯಕ್ಕೆ ಆರೋಪಿ, ಮಲೇಷ್ಯಾ ಮೂಲದ ವಿಜಯಕುಮಾರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು, ಮಲೇಷ್ಯಾದ ಮೂಲದ ಕೆ.ವಿಜಯಕುಮಾರ ಅಪರಾಧಿ ಎಂದು ತೀರ್ಮಾನಿಸಿ, 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಈಗಾಗಲೇ ಅಪರಾಧಿಯು 1 ವರ್ಷ ನ್ಯಾಯಾಂಗ ಬಂಧನದಲ್ಲಿದ್ದು, ಬಂಧನದ ಅವಧಿ ಪರಿಗಣಿಸಿ, ಶಿಕ್ಷಾ ಅವಧಿ ಸೆಟ್‌ಆಫ್‌ ಮಾಡಿ, ₹1.5 ಲಕ್ಷ ದಂಡ ವಿಧಿಸಿ, ತೀರ್ಪು ನೀಡಿದರು.

ಪ್ರಕರಣದಲ್ಲಿ ಪಿರ್ಯಾದಿ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ನ್ಯಾಯ ಮಂಡನೆ ಮಾಡಿದ್ದರು. ಪ್ರಕರಣ ತನಿಖಾಧಿಕಾರಿ ಎಂ.ಶಿವಪ್ರಸಾದ ಹಾಗೂ ಸಿಬ್ಬಂದಿಯನ್ನು, ಸರ್ಕಾರಿ ವಕೀಲ ಬಿ.ಮಂಜುನಾಥ್ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ ಮತ್ತು ಜಿ. ಮಂಜುನಾಥ ಶ್ಲಾಘಿಸಿದ್ದಾರೆ. 

Share this article