24ರಿಂದ ಮಲೆನಾಡು ಕರಕುಶಲ ಉತ್ಸವ, ಫಲ ಪುಷ್ಪ ಪ್ರದರ್ಶನ: ಜಿಪಂ ಸಿಇಒ ಎನ್‌.ಹೇಮಂತ್‌

KannadaprabhaNewsNetwork |  
Published : Jan 21, 2026, 01:45 AM IST
ಪೊಟೋ: 20ಎಸ್‌ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಎನ್‌.ಹೇಮಂತ್‌ ಮಾತನಾಡಿದರು.  | Kannada Prabha

ಸಾರಾಂಶ

ಗಣರಾಜ್ಯೋತ್ಸವದ ಪ್ರಯುಕ್ತ ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63ನೇ ಫಲ ಪುಷ್ಪ ಪ್ರದರ್ಶನವನ್ನು ಜ.24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್)ದಲ್ಲಿ ಆಯೋಜಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಜಿಪಂ ಸಿಇಒ ಎನ್‌.ಹೇಮಂತ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗಣರಾಜ್ಯೋತ್ಸವದ ಪ್ರಯುಕ್ತ ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63ನೇ ಫಲ ಪುಷ್ಪ ಪ್ರದರ್ಶನವನ್ನು ಜ.24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್)ದಲ್ಲಿ ಆಯೋಜಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಜಿಪಂ ಸಿಇಒ ಎನ್‌.ಹೇಮಂತ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ಜಿಪಂ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜ.24 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಮಾರಾಟ ಮೇಳ - ಕ್ರಾ- ಆಫ್ ಮಲ್ನಾಡ್: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು 12163 ಮಹಿಳಾ ಸ್ವಸಹಾಯ ಸಂಘಗಳಡಿ 126456 ಕುಟುಂಬಗಳನ್ನು ಗ್ರಾಮೀಣ ಅಭಿಯಾನದಡಿ ಸಂಘಟಿಸಲಾಗಿದೆ ಎಂದು ವಿವರಿಸಿದರು.

ಕ್ರಾ-ಆಫ್ ಮಲ್ನಾಡ್ ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಈಗಾಗಲೇ ಈ ಬ್ರಾಂಡ್ ಅಡಿಯಲ್ಲಿ ಮಹಿಳೆಯರು ತಯಾರಿಸಿದ ದೀಪಗಳು ಮತ್ತಿತರೆ ಉತ್ಪನ್ನಗಳ ಉತ್ತಮ ಮಾರಾಟವಾಗಿದೆ. ಇದೀಗ ವಿಶೇಷವಾಗಿ ಇ-ಕಾಮರ್ಸ್ ವೆಬ್‌ಸೈಟ್ ರಚನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ವಿವಿಧ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ತಯಾರಿ ಮಾಡಿಕೊಳ್ಳಲಾಗಿದ್ದು ಮೇಳದ ಉದ್ಘಾಟನೆಯಂದು ಜಿಲ್ಲಾ ಉಸ್ತುವಾರಿ ಸಚಿವರು ವೆಬ್‌ಸೈಟ್‌ಗೆ ಚಾಲನೆ ನೀಡುವರು ಎಂದರು.

ಸಿರಿಧಾನ್ಯ ಮೇಳ: ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಸಿರಿಧಾನ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳವನ್ನು ಈ ಮೇಳದಲ್ಲಿಯೇ ಹಮ್ಮಿಕೊಳ್ಳಲಾಗಿದ್ದು, ಸಿರಿಧಾನ್ಯ ಕುರಿತಾದ ಪ್ರತ್ಯೇಕ ಮಳಿಗೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕೈ ಮಗ್ಗ ಜವಳಿ ಮೇಳ: ಜವಳಿ ಮತ್ತು ಕೈಮಗ್ಗ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ 11 ರಾಜ್ಯಗಳು 19 ಜಿಐ ಟ್ಯಾಗ್ ಹೊಂದಿರುವ ವಿವಿಧ ರೀತಿಯ ಸೀರೆಗಳು, ಹ್ಯಾಂಡ್‌ಲೂಂ ಸೀರೆಗಳು, ಶಾಲುಗಳು, ಬೆಡ್ ಶೀಟ್‌ಗಳು ಮತ್ತ ಕೆಎಸ್‌ಐಸಿ ಸೀರೆಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.

ವಿವಿಧ ಸ್ಪರ್ಧೆಗಳು: ರೈತರಿಗಾಗಿ - ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿಶಿಷ್ಟ, ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಜ.26ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ದೂ.ಸಂ 8495876466 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಹೂ ರಂಗೋಲಿ ಸ್ಪರ್ಧೆ: ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಹೂ, ಹಣ್ಣು, ತರಕಾರಿ, ಬೇಳೆಕಾಳುಗಳ ಹಾಗೂ ಧವಸ ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ ಮಾಡಬೇಕು.

ಸಮಾರೋಪ ಸಮಾರಂಭದಲ್ಲಿ ಫಲ ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ವೈ ಆರ್ ಮಲ್ಲಿಕಾರ್ಜುನ, ದುಮ್ಮಳ್ಳಿ ರಘು, ಚಂದ್ರಕಾಂತ ಹಸಗೋಡು ಹಾಜರಿದ್ದರು.

ವಿಶೇಷತೆಗಳು: ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚನೆ ಇರುತ್ತದೆ. ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ರಚನೆ. ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಗಳು ಈ ಬಾರಿಯ ಆಕರ್ಷಣೆಗಳಾಗಿದ್ದು, ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಕುಜ್ಬ ಗಿಡಗಳು(ಬೋನ್ಸಾಯ್) ಗಿಡಗಳ ಪ್ರದರ್ಶನ ಸಹ ಇರುತ್ತದೆ.

ಮೇಳದ ವೈಶಿಷ್ಟ್ಯಗಳು: ಮೇಳದ ಮಳಿಗೆಗಳಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣಗಳು, ಮರದ ಕೆತ್ತನೆಗಳು, ಖೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಫೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೆದರ್ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು, ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳು ಹಾಗೂ ಅಕ್ಕ ಕೆಫೆಯ ಸದಸ್ಯರು, ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ