ಕನ್ನಡಪ್ರಭ ವಾರ್ತೆ ಸಿಂದಗಿ
ತಾಲೂಕಿನ ಕನ್ನೊಳ್ಳಿ ಗ್ರಾಮದ ಹೊರವಲಯದ ಯೋಗಾಯೋಗ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ವಿಜಯಪುರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಲ್ಲಕಂಬ ಹಾಗೂ ಹಗ್ಗದ ಮಲ್ಲಕಂಬ- 2026 ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪ್ರಾಚೀನ ಕಾಲದಲ್ಲಿ ಭೀಮ, ಜರಾಸಂಧ, ವಾಲಿ, ಹನುಮಂತನಂತಹ ದೇಹದಾರ್ಢ್ಯರು ಕುಸ್ತಿ ಅಭ್ಯಾಸಕ್ಕಾಗಿ ಮಲ್ಲಕಂಬವನ್ನು ಬಳಸುತ್ತಿದ್ದರು ಎಂಬ ಪ್ರತೀತಿ ಇದೆ. ಮರದ ಕಂಬಕ್ಕೆ ಎಣ್ಣೆ ಸವರಿಕೊಂಡು ಅದರ ಮೇಲೆ ಹತ್ತಿ ವಿವಿಧ ರೀತಿಯ ಯೋಗಾಸನ, ವ್ಯಾಯಾಮ ಮಾಡುವುದೇ ಮಲ್ಲಕಂಬದ ವೈಶಿಷ್ಟ್ಯ. ಇದರಿಂದ ಏಕಾಗ್ರತೆ, ಧೈರ್ಯ, ಸಹನೆ, ದೇಹದ ಸಮತೋಲನ ಹೆಚ್ಚಾಗುತ್ತದೆ ಎಂದರು.ಗ್ರಾಮ ಪಂಚಾಯತಿ ಅಧ್ಯಕ್ಷ ಸುಭಾಸ ಪರಸನಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್, ಫುಟ್ಬಾಲ್ ನಂತಹ ಪಾಶ್ಚಾತ್ಯ ಕ್ರೀಡೆಗಳ ಹಾವಳಿಯಲ್ಲಿ ನಮ್ಮ ದೇಸಿ ಕ್ರೀಡೆಗಳು ಹಿಂದೆ ಸರಿಯುತ್ತಿವೆ. ಸರಿಯಾದ ಪ್ರೋತ್ಸಾಹ, ತರಬೇತುದಾರರ ಕೊರತೆ, ಆರ್ಥಿಕ ನೆರವಿನ ಅಭಾವದಿಂದ ಮಲ್ಲಕಂಬ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. ಪ್ರತಿ ಶಾಲೆಯಲ್ಲಿ ಕೇಂದ್ರಗಳು ತರೆಯಬೇಕು ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ಯಮನಪ್ಪ ಮೂಡಗಿ ಮಾತನಾಡಿ, ಇಂತಹ ಸ್ಪರ್ಧೆಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿ ಮಲ್ಲಕಂಬದ ಬಗ್ಗೆ ಆಸಕ್ತಿ ಮೂಡುತ್ತದೆ. ಸರ್ಕಾರ ಇನ್ನಷ್ಟು ಅನುದಾನ ನೀಡಿ, ಪ್ರತೀ ತಾಲೂಕಿನಲ್ಲೂ ಮಲ್ಲಕಂಬ ತರಬೇತಿ ಕೇಂದ್ರ ತೆರೆದರೆ, ನಮ್ಮ ಮಣ್ಣಿನ ಈ ವೀರ ಕ್ರೀಡೆ ಮತ್ತೆ ಬೆಳಗುತ್ತದೆ ಎಂದರು. ಯೋಗ ಯೋಗ ಸಂಸ್ಥೆಯ ಸಂಚಾಲಕ ಮಲ್ಲನಗೌಡ ಪಾಟೀಲ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ಮಲ್ಲಕಂಬ ಕ್ರೀಡೆ 4 ವರ್ಷದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಮಲ್ಲಕಂಬ ಕ್ರೀಡೆಯಲ್ಲ, ಅದು ಭಾರತದ ಸಂಸ್ಕೃತಿ, ಯೋಗ ಮತ್ತು ಶಕ್ತಿಯ ಸಂಗಮ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಹನುಮಂತ ಮಲ್ಲಪ್ಪ ರಾಮಪೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಮನಗೌಡ ಪಾಟೀಲ, ರವಿ ಬೂದಿಹಾಳ, ಪ್ರಭು, ಗಣೇಶ ಕಮ್ಮಾರ, ಲಕ್ಷ್ಮಣ ಸೊನ್ನ, ಮಣಿಕಂಠ ಕೊರಡೊರ್, ಮಹಿಬೂಬ ಬಂಡಿವಾಡ, ಕೃಷ್ಣ ಬಜಂತ್ರಿ, ಪ್ರಶಾಂತ ಸೊನ್ನ, ಆದಿತ್ಯ ಕೆರಕಲಮಟ್ಟಿ, ಮೈಲಾರಿ ಸೂರಣಗಿ ಮುಂತಾದವರು ಹಾಜರಿದ್ದರು. ಶಿಕ್ಷಕ ಎಸ್ ಜೆ ಬಿರಾದಾರ ಸ್ವಾಗತಿಸಿ ವಂದಿಸಿದರು. ಶಿಕ್ಷಕ ಜಗದೀಶ ನಿರೂಪಿಸಿದರು.