ಬಿಲ್ಲಿನಂತೆ ಮಣಿಯುವ ಮೈ. ಮಲ್ಲಕಂಬಕ್ಕೆ ಸರಸರನೇ ಏರಿ ನಿಲ್ಲುವ ಮಕ್ಕಳು. ಹಗ್ಗದ ಆಸರೆಯಿಂದಲೇ ಹಲವಾರು ಯೋಗಾಸನಗಳನ್ನು ಹಾಕಿ ಗಮನ ಸೆಳೆದ ಬಾಲಕರು ಹಾಗೂ ಬಾಲಕಿಯರು. ಮಕ್ಕಳ ಈ ಸಾಹಸ ಕಂಡು ಗಣೇಶನ ಭಕ್ತರು ಚೆಪ್ಪಾಳೆ ತಟ್ಟಿದ್ದು ಮುಗಿಲು ಮುಟ್ಟಿವಂತೆ ಮಾಡಿದ್ದು ಕಂಡು ಬಂತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಬಿಲ್ಲಿನಂತೆ ಮಣಿಯುವ ಮೈ. ಮಲ್ಲಕಂಬಕ್ಕೆ ಸರಸರನೇ ಏರಿ ನಿಲ್ಲುವ ಮಕ್ಕಳು. ಹಗ್ಗದ ಆಸರೆಯಿಂದಲೇ ಹಲವಾರು ಯೋಗಾಸನಗಳನ್ನು ಹಾಕಿ ಗಮನ ಸೆಳೆದ ಬಾಲಕರು ಹಾಗೂ ಬಾಲಕಿಯರು. ಮಕ್ಕಳ ಈ ಸಾಹಸ ಕಂಡು ಗಣೇಶನ ಭಕ್ತರು ಚೆಪ್ಪಾಳೆ ತಟ್ಟಿದ್ದು ಮುಗಿಲು ಮುಟ್ಟಿವಂತೆ ಮಾಡಿದ್ದು ಕಂಡು ಬಂತು.
ಈ ದೃಶ್ಯ ಕಂಡು ಬಂದಿದ್ದು ಪಟ್ಟಣದ ವಿನಾಯಕ ನಗರ ಅಭಿವೃದ್ಧಿ ಸಮಿತಿಯಿಂದ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಯ ಮುಂದೆ.
ಗಣೇಶ ಹಬ್ಬದ 3ನೇ ದಿನ ಬುಧವಾರ ಸಂಜೆ ಶನೇಶ್ವರ ಬಳಗದ ವತಿಯಿಂದ ಒಂದು ಗಂಟೆ ಕಾಲ ಮಹಿಳೆಯರಿಂದ ರುದ್ರಪಠಣ ನಡೆಯಿತು. ಶಶಿಕಿರಣ ನವೋದಯ ಅಕ್ಯಾಡೆಮಿ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದಲ್ಲದೆ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಜನಪದ ಹಾಗೂ ಕ್ರೀಡಾರಂಗ ಕುಟೀರದ ಮಕ್ಕಳಿಂದ 20 ನಿಮಿಷಗಳ ಕಾಲ ಸಾಧಾರಣ ವ್ಯಕ್ತಿಗೆ ಏರಲು ಆಗದಂತೆ, ಮಲ್ಲಕಂಬಕ್ಕೆ ಎಣ್ಣೆ ಸವರಿ ಅದರ ಮೇಲೆ ಪ್ರದರ್ಶನ ನೀಡಿದ್ದು ನಿಜಕ್ಕೂ ನೆರೆದ ಜನರ ಮೈ ನವಿರೇಳಿಸುವಂತೆ ಮಾಡಿತು. ಆ ಬಾಲಕ ಬಾಲಕಿಯರ ದೈಹಿಕ ಕಸರತ್ತು, ವಿವಿಧ ಆಸನಗಳು, ಭಂಗಿಗಳು, ಯೋಗಾಸನ ರೂಪಕಗಳನ್ನು ಆಶ್ಚರ್ಯಕರ ರೀತಿಯಲ್ಲಿ ಪ್ರದರ್ಶಿಸಿದರು.
ಮಲ್ಲಕಂಬ ಪ್ರದರ್ಶನವನ್ನು ಬಿಇಡಿ ಮಹಾವಿದ್ಯಾಲಯ ಪ್ರಾಚಾರ್ಯ ಆರ್.ಎಂ. ಅಂಗಡಿ ಹಾಗೂ ಯೋಗ ಪಟು ಅನನ್ಯ ಹಿರೇಮಠ ನಡೆಸಿಕೊಟ್ಟರು.
ಈ ವೇಳೆ ವಿನಾಯಕ ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಕಾರ್ಯದರ್ಶಿ ರಾಘವೇಂದ್ರ ಕಡೆಮನಿ, ಜಗದೀಶ ಆಚಾರಿ, ರವಿ ಬೋಮಲೆ, ವಿಠ್ಠಲ ಬದಿ, ವೀರಭದ್ರಯ್ಯ ಹಿರೇಮಠ, ಪ್ರಕಾಶ ವಾಲಿ, ರಾಜಣ್ಣ ಕನವಳ್ಳಿ, ವೀರೇಶ ಸಾಸಲವಾಡ, ಪರಮೇಶ ಬಾಳಿಕಾಯಿ, ಮಂಜುನಾಥ ಕೊಡ್ಲಿ, ಸತೀಶ ಪಾಟೀಲ, ಭರತ ಜೈನ ಹಾಗೂ ಗಣೇಶ ಮಂಡಲದ ಪದಾಧಿಕಾರಿಗಳು ವಿನಾಯಕ ನಗರದ ಸದ್ಭಕ್ತರಿದ್ದರು. ಅನ್ನಪೂರ್ಣ ಹಿರೇಮಠ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.