ಕನ್ನಡಪ್ರಭ ವಾರ್ತೆ ಘಟಪ್ರಭಾ
ಮಲ್ಲಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಂಘವು ಪ್ರಸಕ್ತ ವರ್ಷದಲ್ಲಿ ₹25.30 ಲಕ್ಷ ಲಾಭ ಗಳಿಸಿ ಪ್ರಗತಿ ಪಥದಲ್ಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಹತ್ತರವಾಟ ಹೇಳಿದರು.ಪಟ್ಟಣದ ವಿಠ್ಠಲ-ರುಕ್ಮಿನಿ ದೇವರ ದೇವಸ್ಥಾನದ ಆವರಣದಲ್ಲಿ ಜರುಗಿದ ಪಿಕೆಪಿಎಸ್ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ರಸಗೊಬ್ಬರ, ಸಾಲ ಸೌಲಭ್ಯ, ಪತ್ತು ಹಂಚಿಕೆ, ಅಲ್ಲದೇ ಸರ್ಕಾರದಿಂದ ಬರುವ ಯಾವುದೇ ಸೌಲಭ್ಯಗಳನ್ನು ಸದಸ್ಯರಿಗೆ ತಲುಪಿಸಲು ಪಿಕೆಪಿಎಸ್ ಸದಾ ಪರಿಶ್ರಮ ವಹಿಸಿ ದುಡಿಯುತ್ತದೆ. ಮರಣೋತ್ತರ ಸದಸ್ಯರಿಗೆ ₹1000 ನೀಡಲು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳಿಂದ ರೈತಗೀತೆ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಂತರ ವರದಿ ವರ್ಷದಲ್ಲಿ ನಿಧನರಾದ ಸಂಘದ ಅಧ್ಯಕ್ಷ, ಕಾರ್ಯನಿರ್ವಾಹಕರು ಹಾಗೂ ಸದಸ್ಯರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ಶಿವು ಯಮಕನಮರಡಿ ವರದಿ ವಾಚನ ಮಾಡಿದರು. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂವರಿಗೆ ನ್ಯಾಯವಾದಿ ಗಂಗಾದರ ಬಡಕುಂದ್ರಿ ಅವರಿಂದ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ರಾಮಣ್ಣ ಹುಕ್ಕೇರಿ, ಶಿವರಾಜ ಬಡಕುಂದ್ರಿ, ಅರವಿಂದ ಬಡಕುಂದ್ರಿ, ವೀರಭದ್ರ ಕರೋಶಿ, ವಿವೇಕ ಹುದ್ದಾರ ಹಾಗೂ ಕೃಷ್ಣಕುಮಾರ ಹುಕ್ಕೆರಿ, ಸಂಘದ ಪ್ರಗತಿ ಕುರಿತು ಮಾತನಾಡಿದರು. ಕ್ರೀಬ್ಕೊ ಕಂಪನಿಯ ಅಧಿಕಾರಿ ಬೆಳೆಗೆ ಸಿಂಪಡಿಸಬೇಕಾದ ಔಷಧಿ ಕುರಿತು ಸಭೆಗೆ ತಿಳಿಸಿದರು.ಸಂಘದ ವ್ಯವಸ್ಥಾಪಕ ಈರಣ್ಣ ಕಮತ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯವರ ಶ್ರಮದಿಂದ ಸಂಘವು ಉತ್ತರೋತ್ತರವಾಗಿ ಬೆಳೆಯುತ್ತ ಬಂದಿದೆ. ಸಂಘದ ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಸಂಘವು ಬೇಳೆಯಲು ಕಾರಣಿಕರ್ತರಾಗಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿದ್ದೇವೆ. ಮುಂದೆ ತಾವುಗಳು ನಮ್ಮ ಸಂಘದಲ್ಲಿ ಹೆಚ್ಚು ಠೇವಣಿ ಮಾಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಲ್ಲಪ್ಪ ಬಡಕುಂದ್ರಿ, ಗಂಗಾದರ ಬಡಕುಂದ್ರಿ, ಮಲ್ಲಪ್ಪ ಬನ್ನನವರ, ಸುರೇಶ ಮುಸಲ್ಮಾರಿ, ರಮೇಶ ತುಕ್ಕಾನಟ್ಟಿ, ಜಿ.ಎಸ್.ರಜಪೂತ, ಶ್ರೀಕಾಂತ ಮಹಾಜನ, ಕಲ್ಲಪ್ಪ ಕೊಂಕಣಿ, ಸುಭಾಸ ಕಾಡದವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.