ಕನ್ನಡಪ್ರಭ ವಾರ್ತೆ ಇಂಡಿ
ಮಹಾರಾಷ್ಟ್ರ ಉಜನಿಯ ಜಲಾಶಯ ಮತ್ತು ಭೀಮಾನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಇಂಡಿ ತಾಲೂಕಿನ ಅವಾಂತರವೇ ಸೃಷ್ಟಿಯಾಗಿದೆ. ತಾಲೂಕಿನ ಅರ್ಜುಣಗಿ ಬಿ ಕೆ ಗ್ರಾಮ ಬಳಿಯ ತೋಟದ ವಸ್ತಿಗಳ ಮನೆಗಳಿಗೆ ನೀರು ನುಗ್ಗಿದ್ದು, ತಗಡಿನ ಶೆಡ್‌ಗಳಲ್ಲಿ ವಾಸವಿದ್ದ ಸುಮಾರು 20 ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ರಕ್ಷಣೆಗಾಗಿ ಮೊರೆಯಿಡುತ್ತಿದ್ದರು, ಬಳಿಕ ಅವರನ್ನು ಸ್ಥಳೀಯರೇ ಹೆಗಲ ಮೇಲೆ ಹೊತ್ತು ಹೊರತರುವ ಮೂಲಕ ಅಪಾಯದಿಂದ ರಕ್ಷಣೆ ಮಾಡಿದ್ದಾರೆ. ಆದರೆ, ಅವರ ಮನೆಗಳಲ್ಲಿದ್ದ ಆಹಾರ ಧಾನ್ಯಗಳು ನೀರು ಪಾಲಾಗಿವೆ. ಗ್ರಾಮದ ವಾಲಿಕಾರ್ ಮತ್ತು ತಳವಾರ ಸೇರಿ 4 ಕುಟುಂಬಗಳ 20 ಜನರನ್ನು ರಕ್ಷಣೆ ಮಾಡಿದ್ದು, ಇದೀಗ ಅವರನ್ನು ಶಾಲಾ ಕಟ್ಟಡದಲ್ಲಿ ಆಶ್ರಯ ಒದಗಿಸಲಾಗಿದೆ. ತಾಲೂಕಿನ ಅರ್ಜುಣಗಿ, ನಿವರಗಿ, ಜಿಗಜಿಣಗಿ ಗ್ರಾಮದಲ್ಲಿ ಹಳ್ಳದ ನೀರು ನುಗ್ಗಿದ್ದರಿಂದ ಕುಟುಂಬಗಳು ರಾತ್ರಿಯಿಡಿ ನಿದ್ರೆಯಿಲ್ಲದೆ ಭಯದಲ್ಲಿ ಕಾಲ ಕಳೆದಿವೆ. ಮನೆಗಳಿಗೆ ನೀರು ನುಗ್ಗಿದ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಸ್ಥಳೀಯ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಿದೆ. ಹಿಂಗಣಿ-ಬರಗುಡಿ ಮುಖ್ಯ ರಸ್ತೆಯ ಮೇಲೆ ಭೀಮಾನದಿ ಹಿನ್ನೀರು ಬಂದಿದ್ದರಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಶಾಲಾ ಮಕ್ಕಳನ್ನು ದಾಟಿಸಲು ಬೋಟ್ ವ್ಯವಸ್ಥೆ ಮಾಡಲಾಗಿದೆ. ನಂತರ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ ನೀರಿನ ತೊಂದರೆ ಅನುಭವಿಸಿದ ಕುಟುಂಬಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಇನ್ನು, ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ, ಬಾಂದಾರಗಳು ತುಂಬಿ ಹರಿಯುತ್ತಿದ್ದು, ಜಮೀನುಗಳು ಜಲಾವೃತವಾಗಿವೆ. ಅಲ್ಲದೇ, ಜಲಾವೃತವಾಗಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಮಳೆ ನೀರಿನ ರಭಸಕ್ಕೆ ಹಿರೇಬೇವನೂರ ಗ್ರಾಮದ ಹಳ್ಳಕ್ಕೆ ಹಾಕಿದ್ದ ಪೈಪುಗಳು ಕಿತ್ತು ಹೋಗಿದ್ದು, ಇಂಡಿ-ಮಣ್ಣೂರ ರಸ್ತೆ ಸಂಚಾರ ಸ್ಥಗಿತವಾಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಗಡಿಭಾಗದ ಇಂಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಭೀಮಾತೀರದ ಗ್ರಾಮಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಗ್ರಾಮಗಳಲ್ಲಿ ಕಂದಾಯ ಹಾಗೂ ಪೊಲೀಸರ ಸಹಯೋಗದಲ್ಲಿ ಡಂಗೂರ ಸಾರಿಸಿ, ಎಚ್ಚರಿಕೆ ನೀಡುವ ಕಾರ್ಯ ನಡೆದಿದೆ. ಖೇಡಗಿ, ಭುಯ್ಯಾರ, ಮಿರಗಿ, ರೋಡಗಿ, ನಾಗರಳ್ಳಿ, ಗುಬ್ಬೇವಾಡ, ಚಿಕ್ಕಮಣೂರ ಗ್ರಾಮಗಳ ಬಳಿಯ ಕಬ್ಬು ಸೇರಿ ಇತರೆ ಬೆಳೆಗಳು ಜಲಾವೃತಗೊಂಡಿವೆ. ಇಷ್ಟೆ ಅಲ್ಲದೇ, ಮಂಗಳವಾರ, ಇಲ್ಲವೇ ಬುಧವಾರ ಭೀಮಾನದಿಗೆ ಬಿಟ್ಟಿರುವ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಚಡಚಣ, ಇಂಡಿ ತಾಲೂಕಿಗೆ ಬರುವ ಸಾಧ್ಯತೆ ಇದೆ. ಈ ನೀರು ಬಂದರೆ ಖೇಡಗಿ ಗ್ರಾಮದ ಬಸವರಾಜೇಂದ್ರ ಮಠದ, ಮಿರಗಿ ಗ್ರಾಮದ ಜಟ್ಟಿಂಗೇಶ್ವರ ದೇವಾಲಯ, ಬರಗುಡಿ, ಹಿಂಗಣಿ, ಗುಬ್ಬೇವಾಡ, ಪಡನೂರ, ಶಿರಗೂರ ಗ್ರಾಮಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ.ಈಗಾಗಲೇ ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್.ಕಡಭಾವಿ ಸೇರಿದಂತೆ ಗ್ರಾಮ ಆಡಳಿತಾಧಿಕಾರಿ, ಪಿಡಿಒ, ಕಂದಾಯ ನಿರೀಕ್ಷಕರು ಭೀಮಾನದಿ ದಂಡೆಯ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು, ಪ್ರವಾಹ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ಪ್ರವಾಹದ ಕುರಿತು ಎಚ್ಚರಿಕೆ ನೀಡಿದ್ದಾರೆ. ಪ್ರವಾಹದಿಂದ ಬಾದಿತವಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು, ತಾಲೂಕಿನ ವ್ಯಾಪ್ತಿಯಲ್ಲಿ ಭೀಮಾನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿ 9 ಬ್ಯಾರೇಜ್‌ಗಳು ನಿರ್ಮಿಸಲಾಗಿದೆ. ಹಿಂಗಣಿ, ಬುಯ್ಯಾರ ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿದ್ದು, ವಿಜಯಪುರ-ಕಲಬುರಗಿ, ಹಿಂಗಣಿ ಬ್ಯಾರೇಜ್ ಮೂಲಕ ವಿಜಯಪುರ-ಸೋಲಾಪೂರಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ಬಂದ್ ಆಗಿದೆ. ಭೀಮಾ ನದಿಯ ಗೋವಿಂದಪೂರ, ಉಮರಾಣಿ, ಚಣೆಗಾಂವ, ಹಿಂಗಣಿ, ಬುಯ್ಯಾರ, ಕಡ್ಲೇವಾಡ, ಶಿರನಾಳ, ಧೂಳಖೇಡ, ಹಿಳ್ಳಿ ಬ್ಯಾರೇಜ್‌ಗಳು ತುಂಬಿ ಹರಿಯುತ್ತಿವೆ. ಭೀಮಾನದಿಗೆ ಹರಿಯುತ್ತಿರುವ ನೀರಿನಿಂದ ಸೊನ್ನ ಬಳಿ ನಿರ್ಮಿಸಿದ ಅಣೆಕಟ್ಟೆಯ ಹಿನ್ನೀರಿನಿಂದ ಮಿರಗಿ-ಕಡಣಿ ರಸ್ತೆ ಸಂಚಾರ ಕೂಡ ಬಂದ್ ಆಗಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಭೀಮಾನದಿ ಪ್ರವಾಹದಿಂದ ತಾಲೂಕಿನ ಶಿರಗೂರ, ಚಣೆಗಾಂವ, ಅಣಚಿ, ಹಿಂಗಣಿ, ರೋಡಗಿ, ಖೇಡಗಿ, ಮಿರಗಿ, ಬುಯ್ಯಾರ, ನಾಗರಳ್ಳಿ ಸೇರಿದಂತೆ ಸುಮಾರು 800ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಬೆಳೆಹಾನಿವಾಗಿದೆ. ಕಬ್ಬು, ತೊಗರಿ, ಹತ್ತಿ, ಮೆಕ್ಕೆಜೋಳ ಬೆಳೆ ನೀರಿನ ರಭಸಕ್ಕೆ ಕಿತ್ತಿಹೋಗಿದೆ. ತೊಗರಿ, ಹತ್ತಿ ಬೆಳೆ ನೀರಿನಲ್ಲಿ ಮುಳುಗಿದೆ.-------------
ಕೋಟ್.....ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಈಗಾಗಲೆ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಈ ನೀರು ಬುಧವಾರ ಬೆಳಿಗ್ಗೆ ವರೆಗೆ ಇಂಡಿ ತಾಲೂಕಿಗೆ ತಲಪುವ ಸಾದ್ಯತೆ ಇದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಈಗಾಗಲೆ ಡಂಗೂರು ಸಾರಲು ಕ್ರಮ ಕೈಗೊಳ್ಳಲಾಗಿದೆ. ಭೀಮಾನದಿ ಪ್ರವಾಹದಿಂದ ತೊಂದರೆಗೆ ಒಳಗಾಗುವ ಗ್ರಾಮದ ಕುಟುಂಬಗಳ ಸುರಕ್ಷತೆಗಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
- ಅನುರಾಧಾ ವಸ್ತ್ರದ, ಎಸಿ ಇಂಡಿ-------------
ಭೀಮಾನದಿಗೆ ಮಹಾರಾಷ್ಟ್ರದ ಉಜನಿ, ಸಿನಾ ಜಲಾಶಯದಿಂದ ಹೆಚ್ಚು ನೀರು ಬಿಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಜನ, ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಸೂಚನೆ ನೀಡಲಾಗಿದೆ. ಬೆಳೆಹಾನಿ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ವರದಿ ತಯಾರಿಸಲು ಹೇಳಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದ್ದು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳಿಗೆ ಗಂಟೆಗೊಮ್ಮೆ ವರದಿ ನೀಡಲು ಸೂಚಿಸಲಾಗಿದೆ.- ಬಿ.ಎಸ್.ಕಡಕಭಾವಿ, ತಹಸೀಲ್ದಾರ್