- ಭೂ ಮಾಫಿಯಾಕ್ಕೆ ಗ್ರಾಪಂ ಪಿಡಿಒ ಸಹಕಾರ, ಕಲುಷಿತ ನೀರು ಪೂರೈಕೆ: ರೈತ ಸಂಘ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಕಲುಷಿತ ನೀರು ಪೂರೈಸಿ, ಜನರ ಜೀವನದೊಂದಿಗೆ ಆಟ ಆಡುತ್ತಿರುವ, ಗ್ರಾಮಸ್ಥರ ವಿರೋಧದ ಮಧ್ಯೆಯೂ ಸ್ಮಶಾನ ಅಭಿವೃದ್ಧಿಗೆ ಮುಂದಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಲು ಆಗ್ರಹಿಸಿ, ಜು.2ರಂದು ಬೆಳಗ್ಗೆ 10.30 ಗಂಟೆಗೆ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮದ ಮುಖಂಡ, ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಶೆಟ್ಟಿಹಳ್ಳಿ ಗ್ರಾಮದ ರಿ.ಸ. ನಂ.36ರಲ್ಲಿ ಸ್ಮಶಾನವಿದೆ. ಈ ಹಿಂದಿನಿಂದಲೂ ಸತ್ತವರ ಅಂತ್ಯಕ್ರಿಯೆ ಅಲ್ಲಿ ನಡೆಸಲಾಗುತ್ತಿದೆ. ಆದರೆ, ಈಗಿನ ಪಿಡಿಒ ಗ್ರಾಮಕ್ಕೆ ಹೊಂದಿಕೊಂಡಿರುವ ರಿ.ಸ. ನಂ.34ರಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ಮಧ್ಯೆಯೂ ಸ್ಮಶಾನ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಬಡಾವಣೆ ಅಭಿವೃದ್ಧಿಪಡಿಸಲು ಹೊರಟಿರುವ ಸ್ಮಶಾನ ಕೇವಲ 50 ಮೀಟರ್ ಅಂತರದಲ್ಲಿದೆ. ಬಡಾವಣೆ ಬಳಿಯೇ ಸ್ಮಶಾನ ಅಭಿವೃದ್ಧಿ ಕೈಗೊಳ್ಳದಂತೆ ಗ್ರಾಮಸ್ಥರು ಆಕ್ಷೇಪಣಾ ಪತ್ರ ನೀಡಿದ್ದಾರೆ. ಆದರೆ, ಪಿಡಿಒ ಕಿವಿಗೊಟ್ಟಿಲ್ಲ. ಪಿಡಿಒ ಗ್ರಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿ, ರಾಜಕೀಯ ವ್ಯಕ್ತಿಗಳ ಪ್ರಲೋಭನೆಗೆ ಒಳಗಾಗಿ, ಭೂ ಮಾಫಿಯಾ ವ್ಯಕ್ತಿಗಳ ಹಿತಾಸಕ್ತಿಗೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದರು.ಭೂ ಮಾಫಿಯಾಗೆ ಪಂಚಾಯಿತಿ ಸ್ವತ್ತು:
ಹೊನ್ನೂರು ಗ್ರಾ.ಪಂ.ಗೊಳಪಡುವ ಮಲ್ಲಶೆಟ್ಟಿಹಳ್ಳಿಯಲ್ಲಿ 1982-83 ಹಾಗೂ 1985-86ರಲ್ಲಿ ಉಪ ಗ್ರಾಮ ಯೋಜನೆಯಡಿ ರಿ.ಸ. ನಂ.28-2ರಲ್ಲಿ 3.34 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್ ಮಾಡಿ, ವಸತಿರಹಿತ ಫಲಾನುಭವಿಗೆ ಹಂಚಿಕೆ ಮಾಡಿ, ಬಾಪೂಜಿ ಬಡಾವಣೆ ಮಾಡಲಾಗಿದೆ. ಈ ಬಡಾವಣೆಯಲ್ಲೇ ಮನೆಗಳು ನಿರ್ಮಾಣವಾಗಿವೆ. ರಿ.ಸ. ನಂ.27-2ರಲ್ಲಿ 3.5 ಎಕರೆ ಜಮೀನು ಮಾಲೀಕರು ಲೇಔಟ್ ಮಾಡಲು ಮುಂದಾಗಿದೆ. ಅಂಥವರಿಗೆ ಅನುಕೂಲ ಮಾಡಿಕೊಡಲು ಬಡಾವಣೆಗೆ 8 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆಂದು ಪಿಡಿಒ ಸರ್ವೇ ಸ್ಕೆಚ್ ಮಾಡಿಸಿ, ಪಂಚಾಯಿತಿ ಸ್ವತ್ತನ್ನು ಭೂ ಮಾಫಿಯಾದವರಿಗೆ ಬಿಟ್ಟುಕೊಡಲು ಸಹಕರಿಸಿದ್ದಾರೆ ಎಂದು ಆರೋಪಿಸಿದರು.ಗ್ರಾಮಸ್ಥರ ಒಕ್ಕಲೆಬ್ಬಿಸುವ ಕೆಲಸ:
ಗ್ರಾಮ ಮುಖಂಡ ಎಂ.ಮಂಜುನಾಥ ಮಾತನಾಡಿ, ಭೂ ಮಾಫಿಯಾ, ಬಂಡವಾಳಶಾಹಿಗಳ ಕೈಗೊಂಬೆ ಆಗಿರುವ ಪಿಡಿಒ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಹೊನ್ನೂರು ಗ್ರಾಪಂ ವ್ಯಾಪ್ತಿಗೆ ಬರುವ ಚರ ಮತ್ತು ಸ್ಥಿರಾಸ್ತಿಗಳ ಬಗ್ಗೆ ಪಿಡಿಓಗೆ ಮಾಹಿತಿಯೇ ಇಲ್ಲ. ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬರುವ ಡಾಬಾಗಳಿಗೆ ಕಡತ, ದಾಖಲೆ ತರಿಸಿಕೊಂಡು, ವ್ಯವಹಾರ ನಿರ್ವಹಿಸುವುದು, ಸಹಿ ಮಾಡುವುದುದನ್ನು ಗ್ರಾಪಂ ಪಿಡಿಒ ಮಾಡುತ್ತಿದ್ದಾರೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಗ್ರಾಪಂ ಮಾಜಿ ಸದಸ್ಯ ಎಂ.ಎಚ್. ಮಹೇಶ್ವರಪ್ಪ, ಜಿ.ಶ್ರೀನಿವಾಸ, ಎಂ.ಜಿ.ನಾಗರಾಜಪ್ಪ, ಸಿದ್ದಪ್ಪ ಮಲ್ಲಶೆಟ್ಟಿಹಳ್ಳಿ ಇತರರು ಇದ್ದರು.
- - -(ಬಾಕ್ಸ್) * ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಪಿಡಿಒ ಈಗ ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು, ಬಾಪೂಜಿ ಬಡಾವಣೆ ನಿವಾಸಿಗಳ ಮಧ್ಯೆ ವ್ಯಾಜ್ಯ ಸೃಷ್ಟಿಸಿ, ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಿದ್ದಾರೆ. ಗ್ರಾಮಕ್ಕೆ ಶುದ್ಧ ನೀರು ಕೊಡಲು ಅವಕಾಶವಿದ್ದರೂ, ಹಳೆ ಪೈಪ್‌ಲೈನ್‌ಗೆ ತೋಳಹುಣಸೆ ಗ್ರಾಮದ ಆರ್‌ಆರ್ ಫ್ಲಾಂಟ್ ನೀರು ಮಿಶ್ರಿತ ಕೆರೆ ನೀರು ಪೂರೈಸುತ್ತಿದ್ದಾರೆ. ಈ ನೀರು ಕುಡಿಯುವುದಕ್ಕಲ್ಲ, ಸ್ನಾನಕ್ಕೂ ಯೋಗ್ಯವಿಲ್ಲದ ಕಲುಷಿತ ನೀರು. ಇಂತಹ ನೀರನ್ನು ಪೂರೈಸಿ, ಜನರಿಗೆ ಅನಾರೋಗ್ಯ ತಂದೊಡ್ಡುತ್ತಿದ್ದಾರೆ. ಈ ಹಿನ್ನೆಲೆ ಪಿಡಿಒ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಸೇವೆಯಿಂದ ಅಮಾನತುಪಡಿಸಬೇಕು ಎಂದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅವರು, ಬಾಟಲಿಗಳಲ್ಲಿ ಸಂಗ್ರಹಿಸಿದ ಕಲುಷಿತ ನೀರಿನ್ನು ಪತ್ರಕರ್ತರೆದುರು ಪ್ರದರ್ಶಿಸಿದರು.
- - --1ಕೆಡಿವಿಜಿ1:
ಹೊನ್ನೂರು ಗ್ರಾಪಂಗೆ ಮುತ್ತಿಗೆ ಹಾಕುವ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.