ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಾರ್ಹ ಹೇಳಿಕೆ; ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Oct 28, 2026, 02:00 AM IST
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆ ಹಾಗೂ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸರಿಯಲ್ಲ

ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಗಡಗಿ ಚನ್ನಪ್ಪ ವೃತ್ತದ ಸಮೀಪದ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ಅವರು ತಮ್ಮ ಹೇಳಿಕೆಗೆ ದೇಶದ ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ದೇಶದ ಪ್ರಧಾನಮಂತ್ರಿ ಹುದ್ದೆ ಅತ್ಯಂತ ಗೌರವಯುತವಾದದ್ದು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆ ಹಾಗೂ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸರಿಯಲ್ಲ. ಎಐಸಿಸಿ ಅಧ್ಯಕ್ಷರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತುಗಳಲ್ಲಿ ಸಂಯಮ ಕಾಯ್ದುಕೊಳ್ಳಬೇಕಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.

ನೇತೃತ್ವ ವಹಿಸಿದ್ದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ರಾಜಕೀಯದಲ್ಲಿ ಟೀಕೆ, ಪ್ರತಿ ಟೀಕೆಗಳು ಸಹಜ. ಆದರೆ, ರಾಜಕೀಯ ವಿರೋಧದ ನೆಪದಲ್ಲಿ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಕಾಂಗ್ರೆಸ್ ನಾಯಕರು ರಾಜಕೀಯ ಟೀಕೆ ಮಾಡುವಾಗ ಸಭ್ಯತೆ ಹಾಗೂ ಸಾರ್ವಜನಿಕ ಜೀವನದ ಘನತೆ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ನಾಯಕರು ಪದೇಪದೇ ಪ್ರಧಾನಿ ಮೋದಿ ಅವರನ್ನು ವೈಯಕ್ತಿಕವಾಗಿ ಟೀಕಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನಪರ ವಿಷಯಗಳ ಕುರಿತು ಚರ್ಚಿಸುವ ಬದಲು ವೈಯಕ್ತಿಕ ನಿಂದನೆಗೆ ಮುಂದಾಗುತ್ತಿರುವುದು ಖಂಡನೀಯ. ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆ ಹಿಂಪಡೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನತೆಯ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಪಕ್ಷದಿಂದ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ವೆಂಕಟರಮಣ, ಜಿಲ್ಲಾ ಪ್ರಮುಖರಾದ ಗೋನಾಳು ಮುರಹರಗೌಡ, ಎಚ್.ಹನುಮಂತಪ್ಪ, ದಾಸರಿ ಗೋವಿಂದ್, ಕೆ.ಎಸ್.ದಿವಾಕರ್, ಪಾಲಿಕೆ ಸದಸ್ಯ ಗೋವಿಂದರಾಜುಲು ಸೇರಿದಂತೆ ಪಕ್ಷದ ನಗರ ಘಟಕದ ಮುಖಂಡರು, ಮಹಿಳಾ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈನ್ ಬಸದಿಯ ಬಾಗಿಲು ತೆರೆಸುವಂತೆ ಮನವಿ
ಲೈಂಗಿಕ ದೌರ್ಜನ್ಯ ತಡೆ ಅಗತ್ಯ: ನ್ಯಾಯಾಧೀಶ ಭರತ್