ಮಲ್ಲಿಕಾರ್ಜುನ್‌ ಖರ್ಗೆಯವರನ್ನು ನಿರ್ಲಕ್ಷಿಸಿದ ಸಿದ್ದು ದಲಿತ ವಿರೋಧಿ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಹೇಳಿಕೆ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೇ ಖರ್ಗೆಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ ದಲಿತ ವಿರೋಧಿ ನೀತಿ ಹೊಂದಿದ್ದಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದರು.

ರಾಹುಲ್‌ಗೆ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಘೋಷಣೆ: ವಿಧಾನ ಪರಿಷತ್ ಸದಸ್ಯ ಆರೋಪ

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಹೇಳಿಕೆ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೇ ಖರ್ಗೆಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ ದಲಿತ ವಿರೋಧಿ ನೀತಿ ಹೊಂದಿದ್ದಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯ ಕುರಿತು ಒಮ್ಮತ ಕೂಡಿ ಬಂದಿಲ್ಲ. ಆದಾಗ್ಯೂ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ್ ಖರ್ಗೆಯವರ ಹೆಸರು ಘೋಷಿಸಿದ್ದಾರೆ.

ಮೊದಲು ಬಿಹಾರ್ ಮುಖ್ಯಮಂತ್ರಿ ನಿತೀಶ್‍ಕುಮಾರ್ ವಿರೋಧಿಸಿದರೂ ಸಹ ನಂತರ ಖರ್ಗೆ ಅವರ ಹೆಸರನ್ನು ಒಪ್ಪಿದ್ದಾರೆ. ಆ ಕುರಿತು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖರ್ಗೆಯವರ ಹೆಸರು ಘೋಷಣೆಯಾದರೂ ಸಹ ಕಾಂಗ್ರೆಸ್ಸಿಗರು ಮಾತ್ರ ಆ ಕುರಿತು ಬಾಯಿ ಬಿಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಮಲ್ಲಿಕಾರ್ಜುನ್ ಖರ್ಗೆ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದೆ. ಕರ್ನಾಟಕದಲ್ಲಿ 50 ವರ್ಷಗಳಿಗೂ ಮೇಲ್ಪಟ್ಟು ಅಧಿಕಾರ ಮಾಡಿರುವ ಕಾಂಗ್ರೆಸ್ ಹಲವಾರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ ಸಹ ಖರ್ಗೆಯವರಿಗೆ ಮಾಡಲಿಲ್ಲ. ಅದೇ ರೀತಿ ಬಿ. ಬಸವಲಿಂಗಯ್ಯ, ಕೆ.ಎಚ್. ರಂಗನಾಥ್, ಕೆ.ಎಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್ ಸೇರಿದಂತೆ ಅನೇಕ ದಲಿತ ಮುಖಂಡರಿಗೆ ಅವಕಾಶವನ್ನೆ ಕೊಡಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ ಅವರಿಗೆ ಉಪ ಮುಖ್ಯಮಂತ್ರಿ ಮಾಡಿದ ಮೇಲೆ ಡಾ. ಜಿ.ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಲಾಯಿತು ಎಂದು ಅವರು ಕಟುವಾಗಿ ಟೀಕಿಸಿದರು.

ಮಮತಾ ಬ್ಯಾನರ್ಜಿ ಖರ್ಗೆಯವರ ಹೆಸರು ಘೋಷಿಸಿದರೂ ಸಹ ಕಾಂಗ್ರೆಸ್ಸಿಗರು ಮಾತ್ರ ಅವರ ಹೆಸರು ಅನುಮೋದಿಸುತ್ತಿಲ್ಲ. ಬದಲಾಗಿ ಸಿದ್ಧರಾಮಯ್ಯ ಅವರು ರಾಹುಲ್‍ಗಾಂಧಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಹೇಳುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ಗೆ ಅಭಿವೃದ್ಧಿಯ ಚಿಂತೆಯಿಲ್ಲ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ವಿರೋಧಿ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಕೇವಲ ಅಧಿಕಾರ ಹಿಡಿಯುವುದೊಂದೇ ಚಿಂತೆಯಾಗಿದೆ ಹೊರತು, ದೇಶದ ಅಭಿವೃದ್ಧಿ ಅಲ್ಲ ಎಂದು ಅವರು ದೂರಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಂಪೂರ್ಣ ನಿಂತು ಹೋಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಕನವರಿಕೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 40,000 ಕೋಟಿ ರು.ಗಳ ಕೋವಿಡ್ ಹಗರಣದ ಕುರಿತು ಮಾತನಾಡಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರಬಹುದು ಎಂದು ಮೊದಲು ಹೇಳಿದರಾದರೂ, ನಂತರ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದಾರೆ ಎಂದಾಗ, ಅದನ್ನು ಸ್ವಾಗತಿಸುವೆ. ಈಗಾಗಲೇ ಕಾಂಗ್ರೆಸ್ ಸರ್ಕಾರವು ತನಿಖೆಗಾಗಿ ಆಯೋಗ ರಚಿಸಿದೆ. ಆ ಆಯೋಗದ ಮುಂದೆ ಯತ್ನಾಳ್ ಅವರು ಮಾಹಿತಿ ಕೊಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ್ ಬಗಲಿ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ್ ಅಷ್ಟಗಿ, ಸಂತೋಷ್ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.

Share this article