ಮಲ್ಲಿಕಾರ್ಜುನ ಎಲ್ಲ ಸಮುದಾಯದ ಆಸ್ತಿ: ಶಾಸಕ ಬಸವಂತಪ್ಪ

KannadaprabhaNewsNetwork | Published : Sep 23, 2024 1:20 AM

ಸಾರಾಂಶ

ಎಸ್‌.ಎಸ್‌. ಮಲ್ಲಿಕಾರ್ಜುನ ಎಲ್ಲ ಸಮುದಾಯದ ಆಸ್ತಿಯಾಗಿದ್ದಾರೆ. ಅಂಥವರನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಗ ನಮ್ಮನ್ನು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಸಚಿವ ಮಲ್ಲಿಕಾರ್ಜುನ ದಾವಣಗೆರೆ, ನಗರ, ಜಿಲ್ಲೆ ಅಭಿವೃದ್ಧಿ ಹರಿಕಾರರಾಗಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

- ಎಸ್ಸೆಸ್ಸೆಂ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ ಎಂದು ಗುಣಗಾನ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಎಸ್‌.ಎಸ್‌. ಮಲ್ಲಿಕಾರ್ಜುನ ಎಲ್ಲ ಸಮುದಾಯದ ಆಸ್ತಿಯಾಗಿದ್ದಾರೆ. ಅಂಥವರನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಗ ನಮ್ಮನ್ನು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಸಚಿವ ಮಲ್ಲಿಕಾರ್ಜುನ ದಾವಣಗೆರೆ, ನಗರ, ಜಿಲ್ಲೆ ಅಭಿವೃದ್ಧಿ ಹರಿಕಾರರಾಗಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದಲ್ಲಿ ಸಚಿವ ಎಸ್ಸೆಸ್ಸೆಂ ಅವರ 57ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡವರು ಸಚಿವ ಮಲ್ಲಿಕಾರ್ಜುನ. ಇಂತಹ ಅಭಿವೃದ್ಧಿಗಳ ಹರಿಕಾರ ಮಲ್ಲಿಕಾರ್ಜುನರ ಸಾಧನೆಯನ್ನು ನೋಡಿ, ಜನರು ತಮ್ಮ ಜನ್ಮದಿನದಂತೆ ಆಚರಿಸಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಂ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ನಾಯಕತ್ವ, ಗುಣ, ಸಮುದಾಯ, ಅಭಿವೃದ್ಧಿ ಚಿಂತನೆ, ದೂರದೃಷ್ಟಿ, ಸೇವಾ ಮನೋಭಾವ ಹೀಗೆ ಎಲ್ಲ ಗುಣಗಳು ಮಲ್ಲಿಕಾರ್ಜುನರ ಅವರಲ್ಲಿವೆ ಎಂದು ಹೇಳಿದರು.

ರಾಜ್ಯದ ಎಲ್ಲ ಕಡೆ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಲಿ. ಸ್ಮಾರ್ಟ್ ಸಿಟಿ ಯೋಜನೆಯ ದಾವಣಗೆರೆಯ ಪಿತಾಮಹ, ಕೆರೆ ತುಂಬಿಸುವ ಕೆಲಸದ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಮಾಡಲಿ. 22 ಕೆರೆ ಏತ ನೀರಾವರಿ ಯೋಜನೆ ಸಚಿವ ಎಸ್ಸೆಸ್ಸೆಂರ 58ನೇ ಜನ್ಮದಿನದಂದೇ ಉದ್ಘಾಟನೆ ಆಗುವಂತೆ ನಾವೆಲ್ಲರೂ ಸೇರಿ, ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

- - -

ಕೋಟ್ಸ್‌ಅಭಿವೃದ್ಧಿಗೆ ಮತ್ತೊಂದು ಹೆಸರು ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ. ಜನಾನುರಾಗಿ ವ್ಯಕ್ತಿತ್ವದ ಎಸ್ಸೆಸ್ಸೆಂ ದಾಖಲೆಯ 20 ಸಾವಿರ ಆಶ್ರಯ ಮನೆ ನಿರ್ಮಿಸುವ ಮೂಲಕ ಬಡವರಿಗೆ ಬದುಕು ಕಟ್ಟಿಕೊಟ್ಟವರು. ನಗರ, ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಮಲ್ಲಿಕಾರ್ಜುನರವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಆಗಲಿದ್ದಾರೆ. ಅಂತಹ ಎಲ್ಲಾ ಶಕ್ತಿ, ಅರ್ಹತೆ, ಯೋಗವೂ ಇದೆ

- ಎಚ್.ಬಿ.ಮಂಜಪ್ಪ, ಜಿಲ್ಲಾಧ್ಯಕ್ಷ, ಕಾಂಗ್ರೆಸ್

- - - ನನ್ನ ನೆಚ್ಚಿನ ನಾಯಕ, ಅಜಾತಶತ್ರು ಎಸ್.ಎಸ್. ಮಲ್ಲಿಕಾರ್ಜುನ ಅವರು 56 ವಸಂತಗಳನ್ನು ಪೂರೈಸಿ 57ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.‌ ಅವರು ಜಾತಿ ನಾಯಕರಾಗದೇ, ಜನ ನಾಯಕರಾಗಿದ್ದಾರೆ. ದಾವಣಗೆರೆ ಪಾಲಿಗೆ ಎಸ್ಸೆಸ್ಸೆಂ ವರಪುತ್ರ . ಜನರು ಮಲ್ಲಿಕಾರ್ಜುನರಿಗೆ ನೀಡುವಷ್ಟು ಪ್ರೀತಿ, ಅಭಿಮಾನ ಬೇರೆ ಯಾವುದೇ ನಾಯಕರಿಗೂ ದೊರೆಯುವುದಿಲ್ಲ. ಕೊರೋನಾ ಸಂಕಷ್ಟದ ವೇಳೆ ಚಿಕಿತ್ಸೆ ಕೊಡಿಸಿ, ಆಕ್ಸಿಜನ್, ಬೆಡ್ ಒದಗಿಸಿ, ಲಸಿಕೆ ಕೊಡಿಸಿ ಸಾವಿರಾರು ಜೀವ ಉಳಿಸಿದ್ದಾರೆ. ಖಂಡಿತವಾಗಿಯೂ ಎಸ್‌.ಎಸ್‌. ಮಲ್ಲಿಕಾರ್ಜುನ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

- - - ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪ್ರಬುದ್ಧ ವ್ಯಕ್ತಿತ್ವದ, ಜನಾನುರಾಗಿ ನಾಯಕಿಯಾದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಲಿದ್ದಾರೆ

- ಎನ್.ಜಯದೇವ ನಾಯ್ಕ, ಅಧ್ಯಕ್ಷ, ತಾಂಡಾ ಅಭಿವೃದ್ಧಿ ನಿಗಮ.

Share this article