ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಡಾ.ಖರ್ಗೆ ಕೊಡುಗೆ ಅಪಾರ

KannadaprabhaNewsNetwork |  
Published : May 03, 2024, 01:06 AM ISTUpdated : May 03, 2024, 10:29 AM IST
ಜೇವರ್ಗಿ ಪಟ್ಟಣದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಪರವಾಗಿ ನಡೆದ ಕಾಂಗ್ರೆಸ್‌ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಅವರ ನಿಜ ಬಣ್ಣ ಬಯಲಾಗಿದೆ: ಸಿಎಂ ಸಿದ್ದರಾಮಯ್ಯ

 ಜೇವರ್ಗಿ :  ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಅವರ ನಿಜ ಬಣ್ಣ ಬಯಲಾಗಿದೆ. ಇದರಿಂದ ಅವರು ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಜೇವರ್ಗಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮ ಪ್ರಜಾಧ್ವನಿ-2ರಲ್ಲಿ ಭಾಗವಹಿಸಿ ಮಾತನಾಡಿದರು.

2014ರಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಲಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರನ್ನು ನಂಬಿ ಜನರು ಮತ ನೀಡಿದ್ದರು.

2019 ರಲ್ಲಿ ಸಂವಿಧಾನದ ಆರ್ಟಿಕಲ್‌ 370 ರದ್ದತಿ, ಪುಲ್ವಾಮಾ ದಾಳಿಯಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದರು. ಆದರೆ 2024 ರಲ್ಲಿ ಮತ್ತೆ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಇದು ಬಹಳ ಮಹತ್ವದ ಚುನಾವಣೆ ಎಂದು ತಾವೆಲ್ಲ ಅರ್ಥ ಮಾಡಿಕೊಂಡಿದ್ದೀರಿ. ಮುಂದಿನ ಐದು ವರ್ಷ ಯಾವ ಪಕ್ಷ ಅಧಿಕಾರದಲ್ಲಿರಬೇಕು, ದೇಶದ ಭವಿಷ್ಯವನ್ನು ಯಾರು ನಿರ್ಮಾಣ ಮಾಡುತ್ತಾರೆಂದು ಯೋಚಿಸಿ ಮತ ನೀಡಿರೆಂದರು.

ದೇಶದ ಯಾವುದೇ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆಯಾಗಲಿ, ಕಾರ್ಯಕ್ರಮವಾಗಲಿ ಜಾರಿಯಾಗಿದೆಯೇ? ದಲಿತರ ಬಗ್ಗೆ ಬದ್ಧತೆಯಾಗಲಿ, ಕಾಳಜಿಯಾಗಲಿ ಇಲ್ಲದ ಬಿಜೆಪಿಯವರು ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಪ್ರಶ್ನಿಸಲು ನೈತಿಕತೆ ಇಲ್ಲ. ಈಗಿನ ನಮ್ಮ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಜನರಿಗಾಗಿ 39 ಸಾವಿರ ಕೋಟಿ ಇಟ್ಟಿದ್ದೇವೆ ಎಂದರು.

ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಖರ್ಗೆಯವರ ಕೊಡುಗೆ ಅಪಾರ: ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲ ಎಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರಕ್ಕೆ ಬರಪರಿಹಾರ ನೀಡಿ ಎಂದು ರಾಜ್ಯ ಮನವಿ ಸಲ್ಲಿಸಿದ್ದರೂ, ಪೂರ್ಣಪ್ರಮಾಣದ ಪರಿಹಾರ ದೊರೆತಿಲ್ಲ. ರಾಜ್ಯದಿಂದ ₹4.50 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ತಲುಪುತ್ತದೆ, ಅದರಲ್ಲಿ ರಾಜ್ಯಕ್ಕೆ ದೊರೆತಿದ್ದು, 2023-24ರಲ್ಲಿ ₹55000 ಕೋಟಿ ಮಾತ್ರ . ಈ ಅನ್ಯಾಯವನ್ನು ಇಲ್ಲಿನ ಬಿಜೆಪಿ ಸಂಸದರು ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಆದರೆ ಈ ಭಾಗದ ಮಲ್ಲಿಕಾರ್ಜುನ ಖರ್ಗೆಯವರು ಸಂಸದರಾಗಿದ್ದರೆ, ಈ ಬಗ್ಗೆ ಕೇಂದ್ರವನ್ನು ಖಂಡಿತವಾಗಿಯೂ ಪ್ರಶ್ನಿಸುತ್ತಿದ್ದರು. ಅವರ ಸೋಲಿನಿಂದ ಈ ಭಾಗದ ಜನರಿಗೆ ಅನ್ಯಾಯವಾಗಿದೆ. ಖರ್ಗೆ ಹಾಗೂ ಧರ್ಮಸಿಂಗ್ ಅವರ ಹೋರಾಟವಿಲ್ಲದಿದ್ದರೆ ಈ ಭಾಗಕ್ಕೆ 371 ಜೆ ಸ್ಥಾನಮಾನ ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಬಿಜೆಪಿಯ ಅದ್ವಾನಿಯವರು ಈ ಸ್ಥಾನಮಾನವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಬಿಜೆಪಿ ಧರ್ಮಜಾತಿಗಳ ನಡುವೆ ದ್ವೇಷ ಬಿತ್ತುತ್ತದೆ: ಬಿಜೆಪಿಯವರು ಧರ್ಮ ಹಾಗೂ ಜಾತಿಗಳ ನಡುವೆ ದ್ವೇಷವನ್ನು ಬೆಳೆಸುತ್ತದೆ. ಅವರಿಗೆ ಜನರ ಪ್ರೋತ್ಸಾಹ ದೊರೆಯಬಾರದು. ರಾಜ್ಯದ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬಲು ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿತು. ಬಡವರ ಕೈಗೆ ಹಣ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲಾಗುತ್ತಿದೆ. 200 ಕೋಟಿ ಮಹಿಳೆಯರು ಶಕ್ತಿಯೋಜನೆ ಬಳಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಪ್ರಶಂಸೆ ದೊರೆತಿದೆ. ಬಡವರ ಕುಟುಂಬಗಳಿಗೆ ತಲಾ 5 ರಿಂದ 6 ಸಾವಿರ ಮಾಹೆಯಾನ ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಸರ್ವರಿಗೂ ಸಮಪಾಲು, ಸಮಬಾಳು ತತ್ವದಂತೆ ಕೆಲಸ ಮಾಡಿದೆ. ನಾವು ನುಡಿದಂತೆ ನಡೆಯುತ್ತೇವೆ. ಆದರೆ ಬಿಜೆಪಿಯವರು ಕೇವಲ ಕನಸುಗಳನ್ನು ಬಿತ್ತಿ ನನಸು ಮಾಡುವ ಪ್ರಯತ್ನವನ್ನು ಮಾಡುವುದಿಲ್ಲ ಎಂದರು.

ಡಿಸಿಎಂ ಡಿಕೆ ಶಿವಕುಮಾರ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಸಚಿವ ಪ್ರಯಾಂಕ್‌ ಖರ್ಗೆ ಸೇರಿದಂತೆ ಸಚಿವರು, ಶಾಸಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು