ವರುಣನ ಆರ್ಭಟಕ್ಕೆ ಮಲೆನಾಡು ತತ್ತರ: ಓರ್ವ ಬಲಿ

KannadaprabhaNewsNetwork |  
Published : Jun 17, 2025, 02:30 AM ISTUpdated : Jun 17, 2025, 02:31 AM IST
ಮೇಗೂರು ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಮರ. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಲೆನಾಡಿನಲ್ಲಿ ವರುಣನ ಆರ್ಭಟ ದಿನೇ ದಿನೇ ಜೋರಾಗುತ್ತಿದೆ. ಸೋಮವಾರವೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಇದರ ಜತೆಗೆ ಬಲವಾಗಿ ಬೀಸುತ್ತಿರುವ ಗಾಳಿಗೆ ಹಲವೆಡೆ ಮರಗಳು ಧರೆಗುರುಳಿದ್ದು, ಓರ್ವ ಬೈಕ್‌ ಸವಾರ ಮೃತಪಟ್ಟಿ ದ್ದಾನೆ. ಶೃಂಗೇರಿ ಶ್ರೀ ಮಠಕ್ಕೆ ಸೇರಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ವಿವಿಧೆಡೆ ಧರೆ ಕುಸಿತ ಉಂಟಾಗಿದೆ.

ಚಲಿಸುತ್ತಿದ್ದ ಬೈಕಿನ ಮೇಲೆ ಬಿದ್ದ ಮರ । ಮಲೆನಾಡಿನ ಹಲವೆಡೆ ಧರೆಗುರುಳಿದ ಮರಗಳು। ಕಪ್ಪೆ ಶಂಕರ ದೇವಾಲಯ ಮುಳುಗಡೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಲೆನಾಡಿನಲ್ಲಿ ವರುಣನ ಆರ್ಭಟ ದಿನೇ ದಿನೇ ಜೋರಾಗುತ್ತಿದೆ. ಸೋಮವಾರವೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಇದರ ಜತೆಗೆ ಬಲವಾಗಿ ಬೀಸುತ್ತಿರುವ ಗಾಳಿಗೆ ಹಲವೆಡೆ ಮರಗಳು ಧರೆಗುರುಳಿದ್ದು, ಓರ್ವ ಬೈಕ್‌ ಸವಾರ ಮೃತಪಟ್ಟಿ ದ್ದಾನೆ. ಶೃಂಗೇರಿ ಶ್ರೀ ಮಠಕ್ಕೆ ಸೇರಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ವಿವಿಧೆಡೆ ಧರೆ ಕುಸಿತ ಉಂಟಾಗಿದೆ.

ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಕಡಬಗೆರೆ ನಿವಾಸಿ ಅನಿಲ್‌ ರುಜಾರಿಯೋ (50) ಸೋಮವಾರ ಬೆಳಿಗ್ಗೆ 10.30 ರ ವೇಳೆಯಲ್ಲಿ ಬೈಕಿನಲ್ಲಿ ಹೋಗುವಾಗ ಮರದ ಕೊಂಬೆಯೊಂದು ಬೈಕಿನ ಮೇಲೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ಗಾಯ ವಾಗಿದ್ದು, ಅವರನ್ನು ಕೂಡಲೇ ಬಾಳೆಹೊನ್ನೂರು ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಲೆನಾಡಿನಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿಗೆ ಜನರು ಆತಂಕಗೊಂಡಿದ್ದಾರೆ. ಮೇಗೂರು ಗ್ರಾಮದ ಶ್ರೀ ವೆಂಕಟ ರ ಮಣ ದೇವಸ್ಥಾನದ ಕೆಳ ಭಾಗದ ಕೊಗ್ರೇ ಗೆ ಹೋಗುವ ರಸ್ತೆಯ ಮಾರ್ಗ ಮಧ್ಯೆ ಬೃಹತ್ ಮರ ಬಿದ್ದಿದೆ. ಕೊಪ್ಪ ತಾಲೂಕಿನ ಹೊಸೂರು ಗ್ರಾಮದ ಗಿಡ್ಡಪ್ಪ ಎಂಬುವವರಿಗೆ ಸೇರಿದ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾಳಾಗಿವೆ.

ಶೃಂಗೇರಿ ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಹೀಗಾಗಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ. ಶೃಂಗೇರಿ ಶ್ರೀಮಠದ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಇಲ್ಲಿನ ಗಾಂಧಿ ಮೈದಾನ, ಕುರುಬಗೇರಿ ಪ್ರದೇಶಗಳು ಜಲಾವ್ರತವಾಗಲಿವೆ. ಭೂ ಕುಸಿತ

ಜಿಲ್ಲೆಯ ಮಲೆನಾಡಿನಲ್ಲಿ ಒಂದೆಡೆ ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ಧರೆ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ನೆಮ್ಮಾರ್‌, ಆನೆಗುಂದ, ತೇವಣ ಬಳಿ ಭೂ ಕುಸಿತ ಉಂಟಾಗಿದೆ. ಕಳಸ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಕಳೆದ ರಾತ್ರಿಯ ಭಾರೀ ಮಳೆಯಿಂದ 4 ಕುಟುಂಬಗಳಿರುವ ಮನೆಗಳ ಹಿಂಭಾಗದಲ್ಲಿ ಗುಡ್ಡ ಕುಸಿತ ಸಾಧ್ಯತೆ ಕಂಡು ಬಂದಿದೆ. ಹಾಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯರನ್ನು ಗಂಜಿ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅಲ್ಲಿಗೆ ಹೋಗುವುದಿಲ್ಲ, ತಮಗೆ ಶಾಶ್ವತ ಪರಿಹಾರ ನೀಡಿದರೆ ಮಾತ್ರ ಹೋಗುವುದಾಗಿ ಪಟ್ಟು ಹಿಡಿದಿದ್ದಾರೆ.

ಮೂಡಿಗೆರೆ, ಕಳಸ, ಚಿಕ್ಕಮಗಳೂರು, ಎನ್‌.ಆರ್.ಪುರ ಹಾಗೂ ಕೊಪ್ಪ ತಾಲೂಕಿನ ಹಲವೆಡೆ ಭೂ ಕುಸಿತ ಉಂಟಾಗಿದೆ. ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆಯಾಗದಂತೆ ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರವಾಗಿ ಕಾರ್ಯ ಪ್ರವೃತ್ತವಾಗಿವೆ.

---- ಬಾಕ್ಸ್‌----ಭಾರೀ ವಾಹನ ಸಂಚಾರ ನಿಷೇಧಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಏಕಪಥವಾಗಿರುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ತನಿಕೋಡುವಿನಿಂದ ಎಸ್.ಕೆ.ಬಾರ್ಡರ್‌ವರೆಗೆ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸೆ.30 ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಭಾರೀ ತಿರುವುಗಳು ಮತ್ತು ಕಡಿದಾದ ಏರಿಗಳಿಂದ ಕೂಡಿರುವ ಈ ರಸ್ತೆ ಇಕ್ಕೆಲಗಳಲ್ಲಿನ ಮಣ್ಣಿನ ಮೇಲ್ಮೈ ಮಳೆಗಾಲದಲ್ಲಿ ಕೊರೆದು ಹೋಗಿ ಕಾರ್ಯಕ್ಷಮತೆ ಕಡಿಮೆ ಆಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. ಇದರಿಂದ ಭಾರೀ ವಾಹನಗಳ ಚಕ್ರಗಳು ಹೂತು ವಾಹನ ಸಂಚಾರಕ್ಕೆ ಅಡಚಣೆಯಾಗುವ ಸಂದರ್ಭವಿದೆ. ಈ ಅಂತರದ ರಸ್ತೆಯಲ್ಲಿರುವ ನಾಲ್ಕು ಕಿರು ಸೇತುವೆಗಳು ಹಾಗೂ ಅಡ್ಡ ಮೋರಿಗಳು ಕೂಡ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಈ ಕಿರು ಸೇತುವೆಗಳ ಕಂಬಗಳು ಕೊರೆಯ ಲ್ಪಟ್ಟು ಭಾರೀ ವಾಹನಗಳ ಸಂಚಾರ ಅಪಾಯಕಾರಿಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಈ ರಸ್ತೆ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಭಾರೀ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ವಾಹನಗಳು ಬಾಳೆಹೊನ್ನೂರು- ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು, ಕೊಪ್ಪ ಕಡೆಯಿಂದ ಬರುವ ವಾಹನಗಳು ಕೊಪ್ಪ-ಜಯಪುರ-ಬಾಳೆಹೊನ್ನೂರು- ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

-16 ಕೆಸಿಕೆಎಂ 3ಮೇಗೂರು ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಮರ.

-- 16 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಕೈಮರದಿಂದ ಐಡಿ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಮರ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ