ಹಾನಗಲ್ಲ: ಅಪೌಷ್ಟಿಕತೆ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ತಾಯಂದಿರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಾಲ್ಯದಲ್ಲಿಯೇ ಹೆಚ್ಚು ಕಾಳಜಿ ಮೂಲಕ ಮಕ್ಕಳ ಸೌಖ್ಯ ಕಾಯ್ದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೇವತಿ ಹೊಸಮಠ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ್ ಜೇಸನ್, ಮಕ್ಕಳ ಆರೋಗ್ಯ ಸಂಪತ್ತು ದೇಶದ ಸಂಪತ್ತು ಎಂಬ ಸತ್ಯದ ಅರಿವು ತಾಯಂದಿರಿಗಿರಲಿ. ಬಡ ಮಕ್ಕಳ ಸಹಾಯಕ್ಕಾಗಿ ನಮ್ಮ ಲೋಯಲಾ ವಿಕಾಸ ಕೇಂದ್ರದಿಂದ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್ ನೀಡಲಾಗುತ್ತಿದೆ. ಇದು ಆರೋಗ್ಯ ಜಾಗೃತಿಗಾಗಿ ಮಾಡುತ್ತಿರುವ ಕಾರ್ಯ. ಸಮಾಜ ಸೇವಾ ಸಂಸ್ಥೆಗಳು ಯಾವಾಗಲೂ ಇಂತಹ ಕಾರ್ಯಗಳಿಗೆ ಬೆಂಬಲಿಸುತ್ತವೆ. ಇದರ ಸದುಪಯೋಗಕ್ಕೆ ಸಮಾಜ ಮುಂದಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ಪಾಟೀಲ, ಸರ್ಕಾರ ನೀಡುವ ತಾಯಿ ಕಾರ್ಡ್‌ನಲ್ಲಿ ತಾಯಂದಿರಿಗೆ ಮಕ್ಕಳ ಲಾಲನೆ ಪಾಲನೆಗಾಗಿ ಉತ್ತಮ ಮಾರ್ಗದರ್ಶನಗಳಿವೆ. ಮಕ್ಕಳ ಅನಾರೋಗ್ಯಕ್ಕೆ ಸಕಾಲಿಕವಾದ ಚಿಕಿತ್ಸೆ ನೀಡಬೇಕು. ಕಾಲ ಕಾಲಕ್ಕೆ ಮಕ್ಕಳಿಗೆ ಅಗತ್ಯ ಚುಚ್ಚುಮದ್ದುಗಳನ್ನು ನೀಡಬೇಕು. ಮಕ್ಕಳಿರುವಾಗ ಆರೋಗ್ಯ ಕಾಳಜಿ ಮಾಡಿದರೆ ಅದು ಬದುಕಿನುದ್ದಕ್ಕೂ ಸಹಕಾರಿಯಾಗಬಲ್ಲದು ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಶಿಶು ಅಭಿವೃದ್ಧಿ ಅಧಿಕಾರಿ ರಾಮು ಬಯಲಸೀಮೆ, ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ವೈದ್ಯೆ ಡಾ.ಪವಿತ್ರಾ ಅರುಣಾಚಲಮಠ, ವೈದ್ಯ ಡಾ.ಎಸ್.ಆರ್.ಕಿತ್ತೂರಮಠ, ಜೇಸನ್ ಪಾಯ್ಸ ಅತಿಥಿಗಳಾಗಿದ್ದರು.