ಕನ್ನಡಪ್ರಭ ವಾರ್ತೆ ಮಲ್ಪೆ
ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಪವಿತ್ರ ಬಲಿಪೂಜೆ ನೇರವೇರಿಸಿ ಸಂದೇಶ ನೀಡಿ ಸಂತ ಜೋಸೆಫರು ತಂದೆಯಂದಿರ ಪೋಷಕರಾಗಿದ್ದು ಅವರ ಸರಳತೆ, ಮೌನ ಹಾಗೂ ಆಧ್ಯಾತ್ಮಿಕತೆ ಸಕಲರಿಗೆ ಮಾದರಿಯಾಗಿದೆ. ಸಂತ ಜೋಸೆಫ್ ಒಬ್ಬ ಮೌನ ಸಂತರಾಗಿದ್ದರು, ಇತರ ಪ್ರಸಿದ್ಧ ಸಂತರಿಗೆ ಹೋಲಿಸಿದರೆ ಹೆಚ್ಚಾಗಿ ಕಡೆಗಣಿಸಲ್ಪಡುತ್ತಿದ್ದರು, ಆದರೆ ಅವರು ಮೋಕ್ಷದ ದೈವಿಕ ಯೋಜನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು ಎಂದರು.
ಪ್ರತಿಯೊಂದು ಕುಟುಂಬಗಳಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದ್ದು ಅವರ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ, ದಾನ ಮತ್ತು ಕ್ಷಮಿಸುವಂತಹ ಪ್ರಮುಖ ಸಾಮರ್ಥ್ಯಗಳನ್ನು ಗುರುತಿಸಬೇಕು. ಯಾವುದೇ ಸವಾಲುಗಳು ಎದುರಾದಾಗ ಅದನ್ನು ಧೈರ್ಯವಾಗಿ ಎದುರಿಸಲು ತಂದೆ ತನ್ನ ಮಕ್ಕಳಿಗೆ ಸದಾ ಭರವಸೆಯ ವ್ಯಕ್ತಿಯಾಗಿರುತ್ತಾರೆ ಎಂದರು.ಪವಿತ್ರ ಬಲಿಪೂಜೆಯ ಬಳಿಕ ಚರ್ಚಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಪ್ರೀತಿಯ ತಂದೆ ಮತ್ತು ಶ್ರದ್ಧಾಭರಿತ ಪತಿಯಾಗಿರುವಾಗ ತಂದೆ ಜೀವನದ ಸವಾಲುಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು.