ಮಲ್ಪೆ ಬಂದರು ನಿಯಮಬಾಹಿರ ನಿರ್ವಹಣೆ ಗುತ್ತಿಗೆ ಆದೇಶ ರದ್ದು ಮಾಡಲು ಆಗ್ರಹ

KannadaprabhaNewsNetwork | Published : May 3, 2025 12:16 AM

ಸಾರಾಂಶ

ಮೀನುಗಾರಿಕಾ ಬಂದರು ನಿರ್ವಹಣಾ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗೆ ನಿಯಮಬಾಹಿರವಾಗಿ ಮುಂದಿನ ಎರಡು ವರ್ಷಗಳಿಗೆ ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಮೀನುಗಾರಿಕಾ ಬಂದರು ನಿರ್ವಹಣಾ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗೆ ನಿಯಮಬಾಹಿರವಾಗಿ ಮುಂದಿನ ಎರಡು ವರ್ಷಗಳಿಗೆ ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಸಭೆ ನಡೆಸಿದರು.ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಮಾತನಾಡಿ ಈ ಹಿಂದೆ ಗುತ್ತಿಗೆ ಪಡೆದವರು ಬಂದರು ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಹಾಗೂ ಟೆಂಡರ್ ನಿಯಮಾವಳಿ ಪಾಲಿಸದೆ ಸಿಸಿಟಿವಿ, ಭದ್ರತಾ ಸಿಬ್ಬಂದಿ ನಿಯೋಜನೆ, ಬಂದರು ಸ್ವಚ್ಛತೆ ಬಗ್ಗೆ ಯಾವುದೇ ಮುತುವರ್ಜಿ ವಹಿಸಿರಲಿಲ್ಲ. ಈ ಬಗ್ಗೆ ಮೀನುಗಾರಿಕೆ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಸಚಿವರಿಗೆ ದೂರು ನೀಡಲಾಗಿದೆ, ಮಲ್ಪೆ ಬಂದರಿನಲ್ಲಿ ನಿರಂತರ ಮೀನು, ಮೀನುಗಾರಿಕಾ ಸಲಕರಣೆಗಳ ಕಳ್ಳತನ ನಡೆಯುತ್ತಿವೆ. ಇತ್ತೀಚೆಗೆ ನಡೆದ ಹಲ್ಲೆ ಘಟನೆ ಕೂಡ ನಡೆದಿದೆ. ಸ್ವತಃ ಜಿಲ್ಲಾಧಿಕಾರಿಯವರೇ ಈ ವ್ಯಕ್ತಿಯ ಗುತ್ತಿಗೆ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿದ್ದಾರೆ. ಆದರೇ ಮೀನುಗಾರಿಕೆ ಅಧಿಕಾರಿಗಳು ಅದೇ ವ್ಯಕ್ತಿಗೆ ಪುನಃ ಗುತ್ತಿಗೆಯನ್ನು ವಿಸ್ತರಿಸಿದ್ದು ಅಕ್ಷಮ್ಯ ಎಂದು ಅಕ್ಷೇಪ ವ್ಯಕ್ತಪಡಿಸಿದರು. ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಮೀನುಗಾರಿಕೆ ಇಲಾಖೆ ನಿರ್ದೇಶಕರು ತಕ್ಷಣ ಮಲ್ಪೆ ಬಂದರಿಗೆ ಆಗಮಿಸಿ, ಮೀನುಗಾರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು, ಗುತ್ತಿಗೆ ಅವಧಿ ವಿಸ್ತರಣೆ ಮಾಡಿದ ಆದೇಶ ಹಿಂಪಡೆದು, ಹೊಸ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿದರು.ಇತ್ತೀಚಿನ ದಿನಗಳಲ್ಲಿ ಮಲ್ಪೆ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಲು ಮುಂದಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಇಲಾಖೆ ತಕ್ಷಣ ಈ ಪ್ರಕ್ರಿಯೆಯನ್ನು ಕೈ ಬಿಡಬೇಕು, ಮಲ್ಪೆ ಬಂದರು ಅಭಿವೃದ್ಧಿ, ನಿರ್ವಹಣೆ ಹಾಗೂ ನಿವೇಶನ ಹಂಚಿಕೆಯಂತಹ ಪ್ರಕ್ರಿಯೆ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಮೀನುಗಾರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಸಹಾಯಕ ನಿರ್ದೇಶಕರಾದ ಸವಿತಾ ಖಾದ್ರಿ, ಮಲ್ಪೆ ಮೀನುಗಾರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article