ಕುಕನೂರು: ಆರಾಮ್ (ಆಶಾ ರಾಯರಡ್ಡಿ ಮಮತಾ) ಸಂಸ್ಥೆ ಸ್ಥಾಪಿಸಿ ಯಲಬುರ್ಗಾ ಕ್ಷೇತ್ರದಲ್ಲಿ ಸಮಾಜ ಸೇವೆಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪುತ್ರಿ ಮಮತಾ ರಾಯರಡ್ಡಿ ಮುಂದಾಗಿದ್ದಾರೆ. ಇದು ಯಲಬುರ್ಗಾ,ಕುಕನೂರು ತಾಲೂಕಿನ ಜನರಲ್ಲಿ ಹೊತನದ ರಾಜಕೀಯ ಚರ್ಚೆ ಸಹ ಮೂಡಿಸಿದೆ. ಸದ್ಯ ಶಾಸಕ ರಾಯರಡ್ಡಿ ಪುತ್ರಿ ರಾಜಕೀಯಕ್ಕೆ ಬರದಿದ್ದರೂ ಸಹ ಮುಂದಿನ ದಿನದಲ್ಲಿ ರಾಜಕೀಯ ವಿದ್ಯಾಮಾನವೇ ಅವರನ್ನು ಕ್ಷೇತ್ರಕ್ಕೆ ತರಲಿದೆ ಎಂಬುದು ರಾಜಕೀಯ ಲೆಕ್ಕಾಚಾರ.
ನಾನು ವೃತ್ತಿಯಲ್ಲಿ ವಕೀಲೆ. ಹೃದಯದಿಂದ ಮಹಿಳೆ ಎಂದು ತಮ್ಮ ಭಾಷಣ ಆರಂಭಿಸುವ ಮಮತಾ ರಾಯರಡ್ಡಿ ಮಾತುಗಳು ಉಭಯ ತಾಲೂಕುಗಳ ಜನರನ್ನು ಸೆಳೆವಂತಾಗಿವೆ. ಈ ಮಣ್ಣಿನ ಋಣದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಬಸವರಾಜ ರಾಯರಡ್ಡಿ ಅವರಿಗೆ ಯಲಬುರ್ಗಾ ಕ್ಷೇತ್ರವೇ ತಮ್ಮ ಮೊದಲ ಮಗು ಎಂದು ಶನಿವಾರ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ದು, ಉಭಯ ತಾಲೂಕುಗಳ ಜನಸೇವೆಗೆ ತಾವು ಸದಾ ತಮ್ಮ ತಂದೆಯೊಂದಿಗೆ ಸಿದ್ಧನಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದವು.
ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಮಮತಾ ರಾಯರಡ್ಡಿ ಅವರು ಹೇಳುತ್ತಿದ್ದರೂ ರಾಜಕೀಯ ರಂಗ ಅವರನ್ನು ರಾಜಕೀಯಕ್ಕೆ ಎಳೆದು ತರುತ್ತದೆ ಎಂಬ ಲೆಕ್ಕಾಚಾರ ಕ್ಷೇತ್ರದ ಜನರಲ್ಲಿ ಮೂಡಿವೆ. ಶಾಸಕ ರಾಯರಡ್ಡಿ ಪುತ್ರಿಯ ವ್ಯಾಮೋಹದಿಂದ ಎಂದಿಗೂ ರಾಜಕೀಯಕ್ಕೆ ಕರೆತರದಿದ್ದರೂ ಸಹ ಮುಂದಿನ ದಿನಗಳಲ್ಲಿ ಮಮತಾ ರಾಯರಡ್ಡಿ ಅವರನ್ನು ಯಲಬುರ್ಗಾ ಕ್ಷೇತ್ರದ ರಾಜಕೀಯ ವಿದ್ಯಮಾನ ಅವರನ್ನು ಕೈ ಬೀಸಿ ಕರೆಯುವಲ್ಲಿ ಸಂದೇಹವಿಲ್ಲ ಎಂಬುದು ಚರ್ಚೆಯಾಗುತ್ತಿದೆ.ಭವಿಷ್ಯದ ನಾಯಕರು?: ಸಮಾಜ ಸೇವೆಯಲ್ಲಿ ತೊಡಗಿರುವ ಮಮತಾ ಕಾರ್ಯಕ್ಕೆ ಇಂಬು ನೀಡುವಂತೆ ಬಸವರಾಜ ರಾಯರಡ್ಡಿ ರಾಜಕೀಯ ನಿವೃತ್ತಿ ನಂತರ ಮಮತಾ ರಾಯರಡ್ಡಿ ಅವರನ್ನು ಬಿಟ್ಟರೆ ಮತ್ತಾರು ಕಾಣರು. ಹಾಗೇ ಮಾಜಿ ಸಚಿವ ಹಾಲಪ್ಪ ಆಚಾರ್ ರಾಜಕೀಯ ನಿವೃತ್ತಿ ನಂತರ ಅವರ ಅಳಿಯ ಆರ್.ಡಿ.ಸಿ.ಸಿ. ಬ್ಯಾಂಕ್ ನಿದೇರ್ಶಕ ಬಸವರಾಜ ರಾಜೂರು ರಾಜಕೀಯಲ್ಲಿ ಪೈಪೋಟಿಗೆ ಬರಬಹುದು ಎಂಬ ಲೆಕ್ಕಾಚಾರ. ಇತ್ತ ಯಲಬುರ್ಗಾ ಕ್ಷೇತ್ರದಲ್ಲಿ ಮಾಜಿ ಶಾಸಕ ಈಶಣ್ಣ ಗುಳಗಣ್ಣವರ ಪುತ್ರ ನವೀನ ಗುಳಗಣ್ಣವರ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯವಾಗಿ ಪಕ್ಷದ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಹಾಗೇ ಮಾಜಿ ಶಾಸಕ ಶಿವಶರಣಪ್ಪಗೌಡ ಅವರ ಪುತ್ರ ಅರವಿಂದಗೌಡ ಪಾಟೀಲ್ ಸಹ ಪಕ್ಷದ ಮುಂದಾಳತ್ವದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷದಿಂದ ಹೊರಬಂದು ಸದ್ಯ ಕ್ಷೇತ್ರದಲ್ಲಿ ತಾಪಂ ಮಾಜಿ ಉಪಾದ್ಯಕ್ಷ ಕಳಕಪ್ಪ ಕಂಬಳಿ ಸಹ ಮುಂದಿನ ಸಲ ಪಕ್ಷೇತರವಾಗಿಯಾದರೂ ಸಹ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.