ಕನ್ನಡಪ್ರಭ ವಾರ್ತೆ ಮಡಿಕೇರಿ
ವಂಚನೆ ಪ್ರಕರಣ ಎದುರಿಸುತ್ತಿರುವ ಖಾಸಗಿ ರೆಸಾರ್ಟ್ ವೊಂದರ ಮಾಜಿ ವ್ಯವಸ್ಥಾಪಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಫೇಸ್ಬುಕ್ ಲೈವ್ ಮಾಡಿದ್ದು, ಆತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ವಿರಾಜಪೇಟೆಯ ಮ್ಯಾಗ್ನೋಲಿನ್ ರೆಸಾರ್ಟ್ ಮಾಜಿ ನೌಕರ ಪ್ರವೀಣ್ ಎಂಬಾತನನ್ನು ಮೈಸೂರಿನ ಲಷ್ಕರ್ ಮೊಹಲ್ಲಾದ ಲಾಡ್ಜ್ ನಲ್ಲಿ ಫೇಸ್ಬುಕ್ ಲೈವ್ ಮಾಡುವ ವೇಳೆ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಇದೀಗ ಮೈಸೂರು ಪೊಲೀಸರು ಆರೋಪಿಯನ್ನು ಕೊಡಗು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರವೀಣ್ ರೆಸಾರ್ಟ್ ಮಾಲೀಕರಿಗೆ 2 ರಿಂದ 3 ಕೋಟಿ ರು. ವಂಚಿಸಿದ್ದ ಆರೋಪ ಎದುರಿಸುತ್ತಿದ್ದ. ಇದರಿಂದ ತಪ್ಪಿಸಿಕೊಳ್ಳಲು ಫೇಸ್ಬುಕ್ ನಲ್ಲಿ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರವೀಣ್ ವೀಡಿಯೋ ಮಾಡಿದ್ದ.ಪೊಲೀಸರು, ರೆಸಾರ್ಟ್ ಮಾಲೀಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ತುಂಬಾ ಅನ್ಯಾಯವಾಗಿದೆ. ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ. ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ. ನನಗಾದ ಅನ್ಯಾಯ ಟಾರ್ಚರ್ ಸಹಿಸಲಾಗುತ್ತಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ನಾನು ಮನೆ ಕಟ್ಟಬಾರದೆ? ಕಾರು ತೆಗೆಯಬಾರದೆ ಎಂದು ಪ್ರಶ್ನೆ ?
ತಮಿಳುನಾಡಿನಿಂದ ನನ್ನ ಹೆಂಡತಿ ಮಕ್ಕಳನ್ನು ಅರೆಸ್ಟ್ ಮಾಡಿ ಕರೆತರುತ್ತಿದ್ದಾರೆ. ರೆಸಾರ್ಟ್ ನಲ್ಲಿ ಬಾರಿ ಅಕ್ರಮಗಳಾಗಿವೆ. ರೆಸಾರ್ಟ್ ನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಅರಣ್ಯ ಭೂಮಿ ಅಕ್ರಮವಾಗಿ ಅತಿಕ್ರಮಣ ಮಾಡಲಾಗಿದೆ. ಲೈಸೆನ್ಸ್ ಇಲ್ಲದೆ ವಿಲ್ಲಾ ಗಳನ್ನು ಕಟ್ಟಲಾಗಿದೆ ಎಂದು ಪ್ರವೀಣ್ ಆರೋಪಿಸಿದ್ದಾನೆ.ನನ್ನ ದೇಹ ತೆಗೆಯುವ ಮೊದಲು ಅವರು ಅರೆಸ್ಟ್ ಆಗಬೇಕು ಎಂದು ಪ್ರವೀಣ್ ಫೇಸ್ಬುಕ್ ನಲ್ಲಿ 15 ನಿಮಿಷದ ವಿಡಿಯೋ ಮಾಡಿದ್ದಾನೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ ಪ್ರವೀಣ್ ಅವರ ಹೆಸರಿನಲ್ಲಿ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಸೂಕ್ತ ದಾಖಲೆ ಒದಗಿಸುವಂತೆ ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಂತೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.