)
ಕನ್ನಡಪ್ರಭ ವಾರ್ತೆ ಬೆಂಗಳೂರು
ರಂಗರಾವ್ ರಸ್ತೆಯ ನಿವಾಸಿ ನಂದೀಶ್ ಹಲ್ಲೆಗೊಳಗಾಗಿದ್ದು, ಈ ಸಂಬಂಧ ಆತನ ಪಕ್ಕದ ಮನೆಯ ಪುಟ್ಟರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಮನೆ ಮುಂದೆ ನಂದೀಶ್ ಪತ್ನಿ ಪಾತ್ರೆ ತೊಳೆಯುವಾಗ ಆರೋಪಿಯು ಅನುಚಿತ ವರ್ತನೆ ತೋರಿದ್ದಾನೆ. ಈ ಕಿಡಿಗೇಡಿ ಕೃತ್ಯವನ್ನು ಪ್ರಶ್ನಿಸಿದ್ದಕ್ಕೆ ಆತನ ಮೇಲೆ ಪುಟ್ಟರಾಜು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗರಾವ್ ರಸ್ತೆಯಲ್ಲಿ ಉದ್ಯಮಿ ಮನೆಯಲ್ಲಿ ಮೈಸೂರು ಜಿಲ್ಲೆಯ ನಂದೀಶ್ ಕಾವಲುಗಾರರಾಗಿದ್ದು, ತನ್ನ ಕುಟುಂಬದ ಜತೆ ಆತ ವಾಸವಾಗಿದ್ದ. ಉದ್ಯಮಿ ಮನೆಯಲ್ಲಿ ಪುಟ್ಟರಾಜು ಕಾರು ಚಾಲಕನಾಗಿದ್ದು, ಆತ ಅದೇ ವಠಾರದಲ್ಲಿ ನೆಲೆಸಿದ್ದಾನೆ. ಹಲವು ದಿನಗಳಿಂದ ನಂದೀಶ್ ಪತ್ನಿ ಜತೆ ಪುಟ್ಟರಾಜು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಈ ಬಗ್ಗೆ ಆತನ ಕುಟುಂಬದವರಿಗೆ ನಂದೀಶ್ ಪತ್ನಿ ಹೇಳಿದ್ದರು. ಆದರೆ ಈ ಸಂಗತಿಯನ್ನು ಅವರು ಲಘುವಾಗಿ ತೆಗೆದುಕೊಂಡಿದ್ದರು. ಮನೆ ಮುಂದೆ ಪಾತ್ರೆ ತೊಳೆಯುವಾಗ, ಬಟ್ಟೆ ಒಣ ಹಾಕಲು ಬಂದಾಗ ಹೀಗೆ ಆಕೆಯನ್ನು ಪುಟ್ಟರಾಜು ಚುಡಾಯಿಸುತ್ತಿದ್ದ. ಈ ವರ್ತನೆಯಿಂದ ನಂದೀಶ್ ಪತ್ನಿ ನೊಂದಿದ್ದರು. ಅಂತೆಯೇ ಬುಧವಾರ ಸಹ ತನ್ನ ಪತಿ ಮನೆಯಲ್ಲಿದ್ದಾಗಲೇ ಆರೋಪಿ ರೇಗಿಸಿದ್ದಾನೆ. ಆಗ ನಂದೀಶ್‌ಗೆ ಪತ್ನಿ ಹೇಳಿದ್ದಾರೆ. ಯಾಕೆ ಹೀಗೆ ನಡೆದುಕೊಳ್ಳುತ್ತೀಯಾ, ನಿನಗೆ ಮರ್ಯಾದೆ ಇಲ್ವಾ ಎಂದು ಪುಟ್ಟರಾಜು ವರ್ತನೆಗೆ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ಆರೋಪಿ, ನಂದೀಶ್ ಮೇಲೆರಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.