ಮಾಗಡಿ: ತಾಲೂಕು ಕಚೇರಿಯ ಕೆಲ ದಾಖಲೆ ಪತ್ರಗಳನ್ನು ಮನೆಯಲ್ಲಿಟ್ಟುಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ತಿರುಮಲೆ ನಿವಾಸಿ ಮಂಜುನಾಥ ಬಂಧಿತ. ಮಂಜುನಾಥ್ 2021-2022ರಲ್ಲಿ ತಾಲೂಕು ಕಚೇರಿಯ ಹಳೆಯ ರೆಕಾಡ್ ರೂಂನಲ್ಲಿ ಜೆರಾಕ್ಸ್ ತೆಗೆಯುವ ಕೆಲಸ ಮಾಡುತ್ತಿದ್ದ. ನಂತರ ಕೆಲಸ ಬಿಟ್ಟು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕರಪತ್ರ, ಇಸಿ ಇತರ ದಾಖಲೆಗಳನ್ನು ಜನರಿಗೆ ಕೊಡಿಸುವ ಕೆಲಸ ಮಾಡುತ್ತಿದ್ದ. ತಾಲೂಕು ಕಚೇರಿಯ ರೆಕಾರ್ಡ್ ರೂಮಿನಲ್ಲಿ ಕೆಲಸ ಮಾಡುವ ವೇಳೆ ಉಳುಮೆ ಚೀಟಿ, ಮಂಜೂರಾತಿ ಪತ್ರದ ಖಾಲಿ ಪತ್ರಗಳು,ತಹಸೀಲ್ದಾರ್ ಸೀಲ್ ಸೇರಿ ಅನೇಕ ಸರ್ಕಾರಿ ಕಾಗದ ಪತ್ರಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ತಿರುಮಲೆಯ ಅರುಣ್ ಕುಮಾರ್ ಎಂಬುವರು ಮಾಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಪೊಲೀಸರು ಮತ್ತು ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ ಅವರು, ಮಂಜುನಾಥನ ಮನೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಅನೇಕ ದಾಖಲೆ ಪತ್ರಗಳು ದೊರೆತಿವೆ. ಮಂಜುನಾಥ ಈ ದಾಖಲೆಗಳು ನಮ್ಮ ಇಲಾಖೆಗೆ ಸಂಬಂಧಪಟ್ಟಿವೆ ಎಂದು ಪೊಲೀಸರಿಗೆ ತಿಳಿಸಿದ್ದು, ದಾಖಲೆಗಳಿದ್ದ ಬ್ಯಾಗ್ ಅನ್ನು ಪೊಲೀಸರು ವಶಪಡಿಸಿಕೊಂಡು ಮಂಜುನಾಥನನ್ನು ಬಂಧಿಸಿದ್ದಾರೆ.ಈ ಹಿಂದೆಯೂ ಮಂಜುನಾಥನ ವಿರುದ್ಧ ದೂರುಗಳು ಕೇಳಿಬಂದಿತ್ತು. ಹಿಂದಿನ ತಹಸೀಲ್ದಾರ್ ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ನಂತರ ಮಂಜುನಾಥ 7 ಸ್ನೇಹಿತರನ್ನು ಬಿಟ್ಟು ದಾಖಲೆಗಳನ್ನು ಕೊಡಿಸುವ ಕೆಲಸ ಮಾಡುತ್ತಿದ್ದ. ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆ, ಆರ್‌ಟಿಸಿ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡು ಹಣ ಪಡೆದು ಸಹಿ, ಸೀಲ್ ಹಾಕಿ ದಾಖಲೆ ಮಾಡಿಕೊಡುತ್ತಿದ್ದ. ಈ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತಂದಾಗ ಆತನ ಮನೆಗೆ ತೆರಳಿ ದಾಖಲೆಗಳನ್ನು ವಶಕ್ಕೆ ಪಡೆದು ಮಂಜುನಾಥನನ್ನು ಬಂಧಿಸಿದ್ದಾರೆ. ಇದರ ಹಿಂದೆ 7-8 ಮಂದಿಯ ದೊಡ್ಡ ಜಾಲವೇ ಇದ್ದು ಸೂಕ್ತ ತನಿಖೆ ನಡೆಸಬೇಕು ಎಂದು ದೂರುದಾರ ಅರುಣ್ ಕುಮಾರ್ ತಿಳಿಸಿದ್ದಾರೆ.ಪೋಟೋ 20ಮಾಗಡಿ2: ಮಾಗಡಿ ತಾಲೂಕು ಕಚೇರಿ ಹೊರನೋಟ.