ಮಡಬೂರು ಸೇತುವೆ ಬಳಿ ವ್ಯಕ್ತಿಗೆ ಕಾರು ಡಿಕ್ಕಿ: ಸಾವು

KannadaprabhaNewsNetwork |  
Published : Jun 25, 2025, 12:34 AM IST
ನರಸಿಂಹರಾಜಪುರ ತಾಲೂಕಿನ ಮಡಬೂರು ಸೇತುವೆ ಸಮೀಪದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಮುಖಂಡರು ರಸ್ತೆಯ ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಮಡಬೂರು ಸೇತುವೆ ಸಮೀಪದ ಮುಖ್ಯ ರಸ್ತೆಯಲ್ಲಿ ಕಾರೊಂದು ಗುಂಡಿ ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ 8.45ರಲ್ಲಿ ನಡೆದಿದೆ.

ಗುಂಡಿ ತಪ್ಪಿಸಲು ಹೋಗಿ ಅಪಘಾತ । ಬಿಜೆಪಿ, ಗ್ರಾಮಸ್ಥರಿಂದ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮಡಬೂರು ಸೇತುವೆ ಸಮೀಪದ ಮುಖ್ಯ ರಸ್ತೆಯಲ್ಲಿ ಕಾರೊಂದು ಗುಂಡಿ ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ 8.45ರಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಡಬೂರಿನ ವಿಶ್ವ ಕರ್ಮ ಸಮಾಜದ ಚಂದ್ರಶೇಖರ್ ಆಚಾರ್ (56 ) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಒಬ್ಬ ಮಗನನ್ನು ಅಗಲಿದ್ದಾರೆ. ಮೃತ ಚಂದ್ರಶೇಖರ್ ಆಚಾರ್ ಸೋಮವಾರ ರಾತ್ರಿ 8.45 ರ ಸುಮಾರಿಗೆ ಮಡಬೂರಿನ ತಮ್ಮ ಮನೆಯಿಂದ ಮಡಬೂರು ದೇವಸ್ಥಾನ ಸಮೀಪದ ಅಂಗಡಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ನರಸಿಂಹರಾಜಪುರ ಕಡೆಯಿಂದ ಬಂದ ಡಸ್ಟರ್ ಕಾರು ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಚಂದ್ರ ಶೇಖರ್ ಆಚಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಪೆಟ್ಟಾದ ಚಂದ್ರಶೇಖರ್ ಆಚಾರ್ ಕೆಳಗೆ ಬಿದ್ದಿದ್ದಾರೆ. ಕಾರಿನ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ತೀವ್ರ ಪೆಟ್ಟಾದ ಚಂದ್ರಶೇಖರ್ ಆಚಾರ್‌ ಅವರನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಮಾಜಿ ಸಚಿವ ಡಿ.ಎನ್‌.ಜೀವರಾಜ್, ಬಿಜೆಪಿ ಮುಖಂಡರಾದ ಅರುಣಕುಮಾರ್, ಎನ್‌.ಎಂ.ಕಾಂತರಾಜ್ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಪ್ರತಿಭಟನೆ: ಮಂಗಳವಾರ ಬೆಳಿಗ್ಗೆ ಅಪಘಾತವಾದ ಸ್ಥಳದಲ್ಲೇ ಬಿಜೆಪಿಯವರು ಹಾಗೂ ಸ್ಥಳೀಯರು ರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಗುಂಡಿ ತಪ್ಪಿಸಲು ಹೋಗಿ ಕಾರು ಚಂದ್ರಶೇಖರ್ ಆಚಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಈಗಾಗಲೇ ಈ ಗುಂಡಿಯಲ್ಲಿ ಅನೇಕ ಬೈಕ್ ಸವಾರರು ಉರುಳಿ ಬಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್,ಸಹಕಾರ ಸಂಘದ ನಿರ್ದೇಶಕ ರಾಜುಪ್ರಸನ್ನ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸದಾನಂದ, ಸ್ಥಳೀಯ ಮುಖಂಡರಾದ ಮಿಲಿಟರಿ ರವಿ, ರತ್ನಾಕರ, ಪ್ರಭಾಕರ, ರೇವತಿ, ಲಿಂಗಮ್ಮ, ಕವಿತ, ಯಶೋದ, ಕಾರ್ತಿಕ್ ಮುಂತಾದವರು ಪಾಲ್ಗೊಂಡಿದ್ದರು.

-- ಬಾಕ್ಸ್ --

ತೋಟಕ್ಕೆ ಹೋದರೆ ಆನೆ ಕಾಟ, ರಸ್ತೆಯಲ್ಲಿ ಗುಂಡಿ ಕಾಟ

ಶೃಂಗೇರಿ ಕ್ಷೇತ್ರದಲ್ಲಿ ತೋಟಕ್ಕೆ ಹೋದರೆ ಆನೆ ಕಾಟ, ರಸ್ತೆಯಲ್ಲಿ ಹೋಗಬೇಕಾದರೆ ಗುಂಡಿ ಕಾಟದಿಂದ ನಾಗರಿಕರು, ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಯ ಗುಂಡಿ ಮುಚ್ಚಲು ಕಳೆದ 7 ವರ್ಷಗಳಲ್ಲಿ ಈಗಿನ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಸ್ತೆಗಳ ಅಭಿವೃದ್ಧಿಗೆ ಎಷ್ಟು ಕೋಟಿ ಖರ್ಚಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಶೃಂಗೇರಿ ಕ್ಷೇತ್ರದ ರಸ್ತೆಯ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಹಣ ಬಂದಿದೆ. ಇಲ್ಲಿಯ ಕಾಮಗಾರಿಗಳನ್ನು ಬೆಂಗಳೂರಿನ ಲ್ಯಾಂಡ್ ಆರ್ಮಿಯವರಿಗೆ ನೀಡಲಾಗುತ್ತಿದೆ. ಚಿಕ್ಕಮಗಳೂರು ಲ್ಯಾಂಡ್ ಆರ್ಮಿಯವರಿಗೆ ಯಾಕೆ ಕಾಮಗಾರಿಗಳ್ನು ನೀಡುತ್ತಿಲ್ಲ ? ಎಂದು ಪ್ರಶ್ನಿಸಿದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ