ಅಕ್ರಮ ಚಟುವಟಿಕೆ ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲ

KannadaprabhaNewsNetwork |  
Published : Jun 25, 2025, 12:34 AM IST
ಕಾರಟಗಿ ಪೊಲೀಸ್‌ ಠಾಣೆಗೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷರ ಬಸವರಾಜ ದಢೆಸ್ಗೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಸಚಿವ ಶಿವರಾಜ ತಂಗಡಗಿ ಬೆಂಬಲಿಗರು ಅಕ್ರಮ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟು, ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಅನ್ಯ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ರೌಡಿಶೀಟ್ ತೆರೆಯುವುದು, ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಾರೆ.

ಕಾರಟಗಿ:

ಕನಕಗಿರಿ ವಿಧಾನಸಭೆ ಕ್ಷೇತ್ರಾದ್ಯಂತ ಅಕ್ರಮ ಮರಳು ಸಾಗಣೆ, ಇಸ್ಪಿಟ್‌ ಕ್ಲಬ್‌ ಮತ್ತು ಮಟಕಾ ಸೇರಿ ವಿವಿಧ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಮಾತನಾಡಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರ ಕಂಡು ಪೊಲೀಸ್ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ. ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರಟಗಿ ಹಾಗೂ ಕನಕಗಿರಿ ಪಿಐಗಳನ್ನು ತರಾಟೆಗೆ ತೆಗೆದುಕೊಂಡ ದಢೇಸುಗೂರು, ನೀವು ಠಾಣಾಧಿಕಾರಿಯಾಗಿ ಬಂದ ಮೇಲೆಯೇ ಹೆಚ್ಚಿನ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಪಟ್ಟಣದ ಎಪಿಎಂಸಿಯಲ್ಲೇ ಇಸ್ಪಿಟ್ ಅಂದರ್-ಬಾಹರ್ ಜೂಜಾಟ ನಡೆಯುತ್ತಿವೆ. ಗಲ್ಲಿ-ಗಲ್ಲಿಯಲ್ಲಿ ಮಟ್ಕಾ ನಡೆಯುತ್ತಿದೆ. ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೇ ಸಾಗಿದೆ. ಈ ಮರಳು ಸಾಗಣೆ ವಾಹನಕ್ಕೆ ಸಿಲುಕಿ ಸೋಮನಾಳ-ಗುಡೂರು ಯುವಕರು ಮೃತಪಟ್ಟಿದ್ದಾರೆ ಎಂದು ಕಿಡಿಕಾರಿದರು.

ಕ್ಷೇತ್ರಾದ್ಯಂತ ಕ್ಲಬ್ ನಡೆಯುತ್ತಿವೆ. ಯಾವುದಕ್ಕೂ ಅಂಕುಶವಿಲ್ಲ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಅಪ್ಪಣೆ ಇಲ್ಲದೇ ನಡೆಯಲು ಸಾಧ್ಯವೇ? ನಾನು ಈ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದು 15 ವರ್ಷ ಕಳೆದಿದ್ದರೂ ಒಂದು ದಿನವೂ ಈ ರೀತಿಯಾಗಿ ನಾವು ಠಾಣೆ ಮುಂದೆ ಬಂದು ನಿಂತಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ಕಾನೂನಿನ ಮುಂದೆ ಸರ್ವರೂ ಸಮಾನರು ಎನ್ನುವುದನ್ನು ಪೊಲೀಸ್ ಇಲಾಖೆ ಮೊದಲು ತಿಳಿದುಕೊಳ್ಳಬೇಕಾಗಿದೆ. ಆದರೆ, ಅಧಿಕಾರವಿದ್ದವರಿಗೆ ಒಂದು ಕಾನೂನು, ಇಲ್ಲದವರಿಗೆ ಒಂದು ಕಾನೂನು ಎನ್ನುವ ವರ್ತನೆ ಸರಿಯಲ್ಲ ಎಂದು ಪರೋಕ್ಷವಾಗಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಜುನಾಥ ಮಸ್ಕಿ ಮತ್ತು ನಾಗರಾಜ ಬಿಲ್ಗಾರ್ ಮಾತನಾಡಿ, ಸಚಿವರ ಬೆಂಬಲಿಗರು ಅಕ್ರಮ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟು, ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಅನ್ಯ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ರೌಡಿಶೀಟ್ ತೆರೆಯುವುದು, ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಾರೆ. ಈ ಮೂಲಕ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಳಿಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೇಂದು ಡಿವೈಎಸ್ಪಿಗೆ ಮನವಿ ಸಲ್ಲಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮಂಡಲ ಮಾಜಿ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಪುರಸಭೆ ಮಾಜಿ ಸದಸ್ಯ ಜಿ. ತಿಮ್ಮನಗೌಡ, ಬಸವರಾಜ ಬಿಲ್ಗಾರ್, ಹನುಮಂತಪ್ಪ ಬೋವಿ ಹಂಚಿನಾಳ, ರವಿಸಿಂಗ್ ವಕೀಲರು, ಬಸವರಾಜ ಶೆಟ್ಟರ್, ದೇವರಾಜ್ ಜೂರಟಗಿ, ವಿಕ್ರಮ್ ಮೇಟಿ ಬೇವಿನಾಳ, ಹನುಮಂತಪ್ಪ ಕಬ್ಬೇರ, ಶರಣಪ್ಪ ನಾಗೋಜಿ, ಪುರಸಭೆ ಸದಸ್ಯರಾದ ಆನಂದ ಮ್ಯಾಗಳಮನಿ, ಸೋಮಶೇಖರ ಬೇರಿಗೆ, ಬಸವರಾಜ ಕೊಪ್ಪದ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಪ್ರಿಯಾಂಕ ಪವಾರ, ಸೌಭಾಗ್ಯ ಗಂಗಾವತಿ, ಲಿಂಗಪ್ಪ ಕೊಟ್ನೇಕಲ್ ಸಿದ್ದಾಪುರ, ದುರುಗೇಶ್ ಹೊಸಕೇರಾ, ಮಲ್ಲಿಕಾರ್ಜುನ ಯರಡೋಣಾ, ಶಿವಪುತ್ರಯ್ಯಸ್ವಾಮಿ, ಸುರೇಶ ರಾಥೋಡ, ಆನಂದ ಜೂರಟಗಿ, ಬಸವರಾಜ ಕೆಂಡದ, ನಾಗಪ್ಪ ಕೆಂಗೇರಿ, ಲಕ್ಷ್ಮಣ ನಾಯಕ, ಪಂಪನಗೌಡ, ದುಗ್ಗೇಶ ಹೆಗಡೆ ಗುಂಡೂರು ಇದ್ದರು.ಪೊಲೀಸರು ಆಡಳಿತ ಪಕ್ಷದ ಕಾರ್ಯಕರ್ತರಿಗೊಂದು ನ್ಯಾಯ, ವಿರೋಧ ಪಕ್ಷದ ಕಾರ್ಯಕರ್ತರಿಗೆ ಒಂದು ನ್ಯಾಯ ಎನ್ನುವ ಪದ್ಧತಿ ಕೈಬಿಡಬೇಕು. ಕಾನೂನು ಬದ್ಧವಾಗಿ ನಡೆಯುವ ಯಾವುದೇ ಚಟುವಟಿಕೆಗಳಿಗೆ ತಾರತಮ್ಯ ನೀತಿ ಅನುಸರಿಸಬಾರದು.

ಬಸವರಾಜ ದಢೇಸುಗೂರು ಬಿಜೆಪಿ ಜಿಲ್ಲಾಧ್ಯಕ್ಷ

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!